*ಗೋಣಿಕೊಪ್ಪ, ಜು. ೧೨: ಪ್ರಾಚೀನ ಆದಿವಾಸಿ ಯರವ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾ. ೧೭ ರಂದು ಗೋಣಿಕೊಪ್ಪದ ಉಮಾ ಮಹೇಶ್ವರಿ ದೇವಸ್ಥಾನದಿಂದ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿವರೆಗೆ ಅರೆಬೆತ್ತಲೆ ಕಾಲ್ನಡಿಗೆ ಜಾಥಾ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಯರವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ, ಬುಡಕಟ್ಟು ಸಮುದಾಯದ ಪ್ರಾಚೀನ ಅದಿವಾಸಿ ಯರವರು ಸುಮಾರು ೩೩ ಸಾವಿರ ಮಂದಿ ಇದ್ದಾರೆ. ಆದರೆ, ಶೇ. ೬೫ ರಷ್ಟು ಕುಟುಂಬಗಳಿಗೆ ಯಾವುದೇ ಭೂಮಿ, ನಿವೇಶನ, ಶಿಕ್ಷಣ, ಆರೋಗ್ಯ, ಸರ್ಕಾರಿ ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಕಳೆದ ೨೫ ವರ್ಷದಿಂದ ಸಂವಿಧಾನಬದ್ದ ಮೂಲಭೂತ ಸೌಲಭ್ಯಗಳಿಗೆ ಹೋರಾಟ ನಡೆಸುತ್ತಾ ಬಂದಿದ್ದರೂ, ಈವರೆಗೂ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ.

ಸಾವಿರಾರು ಯರವ ಕುಟುಂಬಗಳು ಶ್ರೀಮಂತರ ಕಾಫಿ ತೋಟದಲ್ಲಿರುವ ಲೈನ್ ಮನೆಗಳಲ್ಲಿ ವಾಸವಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿ, ದುಡಿಯುತ್ತಾ ಅತ್ಯಾಮೂಲ್ಯ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮತಕ್ಕಾಗಿ ಮಾತ್ರ ಬಳಕೆಯಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಯರವರನ್ನು ಮೂಲ ನಿವಾಸಿಗಳೆಂದು ಘೋಷಣೆ ಮಾಡಬೇಕು. ಯರವ ವಿದ್ಯಾವಂತ ಮತ್ತು ವೃತಿಪರ ತರಬೇತಿ ಹೊಂದಿರುವ ಯುವಕ ಯುವತಿಯರಿಗೆ ಬ್ಯಾಕ್‌ಲಾಗ್ ಹುದ್ದೆಗೆ ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು. ಯರವರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಹಾಗೂ ಮುಂಗಡ ಪತ್ರದಲ್ಲಿ ಯರವರಿಗೆ ಪ್ರತ್ಯೇಕ ಅನುದಾನ ಕಾಯ್ದಿರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಕಾಲ್ನಡಿಗೆ ಜಾಥಾ ನಡೆಸಲು ನಿರ್ಧರಿಸಲಾಗಿದೆ ಎಂದು ಮುತ್ತ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವೈಬಿ ಗಣೇಶ್, ವೈಸಿ ಶಂಕರ್, ವೈ ಸಿದ್ದ, ಪಿ.ಸಿ. ಸುರೇಶ, ಸುಬ್ರಮಣ್ಯ, ರಾಮು, ಸುಬ್ರಮಣ್ಯ ಉಪಸ್ಥಿತರಿದ್ದರು.