ಮಡಿಕೇರಿ, ಜು. ೧೨: ಇನ್ನರ್ ವೀಲ್ ಜಿಲ್ಲೆ ೩೧೮ನ ಅಧ್ಯಕ್ಷೆಯಾಗಿ ಮಡಿಕೇರಿಯ ಪೂರ್ಣಿಮಾ ರವಿ ಅಧಿಕಾರ ಸ್ವೀಕರಿಸಿದ್ದಾರೆ.

ಮೈಸೂರಿನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಡಿಕೇರಿಯ ಹೆಸರಾಂತ ವೈದ್ಯ ಡಾ.ರವಿ ಅಪ್ಪಾಜಿ ಅವರ ಪತ್ನಿ ಪೂರ್ಣಿಮಾ ರವಿ ಅವರು ಇನ್ನರ್ ವೀಲ್ ಜಿಲ್ಲೆ ೩೧೮ರ ಅಧ್ಯಕ್ಷೆಯಾಗಿ ಭಾರತೀಯ ಇನ್ನರ್ ವೀಲ್ ಸಂಸ್ಥೆಯ ಅಸೋಸಿಯೇಷನ್ ಅಧ್ಯಕ್ಷೆ ಪ್ರೀತಿ ಗುಗ್ನಾನಿ ಅವರಿಂದ ಅಧಿಕಾರ ಪಡೆದರು.

ಈ ಸಂದರ್ಭ ಮಾತನಾಡಿದ ಪ್ರೀತಿ ಗುಗ್ನಾನಿ, ಇನ್ನರ್ ವೀಲ್ ಸಂಸ್ಥೆಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಸದಸ್ಯೆಯರು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಪೂರ್ಣಿಮಾ ರವಿ, ಈ ವರ್ಷ ಶಿಕ್ಷಣ, ಮಹಿಳೆಯರ ಆರೋಗ್ಯಕ್ಕೆ ಸಂಬAಧಿಸಿದAತೆ ಹಲವಷ್ಟು ಯೋಜನೆಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸ ಲಾಗುತ್ತದೆ. ಹಾಗೇ ಈ ವರ್ಷದಲ್ಲಿ ಪೇಪರ್ ಬಳಕೆ ಮಾಡದೇ ಪೇಪರ್ ರಹಿತವಾಗಿ ಕಾರ್ಯ ಯೋಜನೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದರು. ಶತಮಾನೋತ್ಸವ ಸಂಭ್ರಮ ದಲ್ಲಿರುವ ಇನ್ನರ್ ವೀಲ್ ಜಿಲ್ಲೆ ೩೧೮ ಈ ಸಾಲಿನಲ್ಲಿ ಬೆಳಕನ್ನು ಪ್ರಜ್ವಲಿಸು ಎಂಬ ಧ್ಯೇಯ ವಾಕ್ಯವನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ಇನ್ನರ್ ವೀಲ್ ಜಿಲ್ಲಾ ಸಮ್ಮೇಳನ ಮಡಿಕೇರಿಯಲ್ಲಿ ಆಯೋಜಿತವಾಗಿದೆ ಎಂದು ಪೂರ್ಣಿಮಾ ರವಿ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಿಂದ ಮಿನ್ನಿ ಬೋಪಯ್ಯ, ಪ್ರೇಮ ಕಾಳಪ್ಪ ಕೆಲವು ವರ್ಷಗಳ ಮೊದಲು ಇನ್ನರ್ ವೀಲ್ ಜಿಲ್ಲಾಧ್ಯಕ್ಷರಾಗಿದ್ದು ಇದೀಗ ಪೂರ್ಣಿಮಾ ರವಿ ಕೊಡಗಿನಿಂದ ಮೂರನೇ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ.

ಪದಗ್ರಹಣ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷೆ ಕವಿತಾ ನಿಯತ್ ಹಾಜರಿದ್ದರು. ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆಯರು, ಪದಾಧಿಕಾರಿಗಳು, ಸದಸ್ಯೆಯರು, ರೋಟರಿ ಸಂಸ್ಥೆಯ ಮಾಜಿ ಗವರ್ನರ್‌ಗಳು, ಸದಸ್ಯರು ಪಾಲ್ಗೊಂಡಿದ್ದರು.