ಚೆಯ್ಯಂಡಾಣೆ, ಜು. ೧೧: ಒಂಟಿ ಕಾಡಾನೆಯೊಂದು ಸಮೀಪದ ತೋಟದಿಂದ ನೇರವಾಗಿ ಗೇಟ್ ತೆರೆದು ರಸ್ತೆಗೆ ಬಂದು ರಸ್ತೆಯ ಮುಖಾಂತರ ಪಟ್ಟಣದಲ್ಲಿ ಸಂಚರಿಸಿ ನಿನ್ನೆ ಪ್ರತಿಭಟನೆ ನಡೆದಿದ್ದ ಮುಖ್ಯ ರಸ್ತೆಯ ಸಮೀಪದಲ್ಲೇ ಇರುವ ಚೆಯ್ಯಂಡ ಪ್ರಕಾಶ್ ಅವರ ಮನೆ ಅಂಗಳಕ್ಕೆ ನುಗ್ಗಿ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿ ನಂತರ ಹೂ ಗಿಡಗಳನ್ನು ಬಾಳೆ ಗಿಡಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.
ಸ್ಥಳೀಯ ಕರ್ನಾಟಕ ಬ್ಯಾಂಕ್ ಸಮೀಪದ ವೆಸ್ಟರ್ನ್ ವ್ಯಾಲು ಟೇಡರ್ಸ್ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಒಂದು ತಿಂಗಳ ಹಿಂದೆ ಇದೇ ಸಿಸಿ ಕ್ಯಾಮರದಲ್ಲಿ ಕಾಡಾನೆ ತೆರಳುವ ದೃಶ್ಯ ಸೆರೆಯಾಗಿತ್ತು. ನಿನ್ನೆ ಅದೇ ಕಾಡಾನೆ ಮರಳಿ ಬಂದಿದ್ದು, ಈ ಭಾಗದ ಜನರು ಭಯದಿಂದ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಕ್ಯಾಂಪ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು.
-ಅಶ್ರಫ್