ಕೂಡಿಗೆ, ಜು. ೧೨: ಕುಶಾಲನಗರ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರದ ವತಿಯಿಂದ ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಮತ್ತು ಅಂಗನವಾಡಿ ಕೇಂದ್ರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಟೆಂಡರ್ ಪಡೆದವರು ಈ ಬಾರಿ ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡಿರುವುದು ಕಂಡು ಬಂದಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಬಸವನತ್ತೂರು ಸೇರಿದಂತೆ ಅನೇಕ ಅಂಗನವಾಡಿಗಳಿಗೆ ಆಯಾ ವ್ಯಾಪ್ತಿಯ ಫಲಾನುಭವಿ ಮಹಿಳೆಯರಿಗೆ ಈಗಾಗಲೇ ವಿತರಣೆ ಮಾಡಲಾಗಿದೆ. ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಾಗ ಅದರ ಒಳ ಭಾಗದಲ್ಲಿ ಕಪ್ಪುಬಣ್ಣದಲ್ಲಿದ್ದು, ಜೊತೆಯಲ್ಲಿ ದುರ್ವಾಸನೆಯಿಂದ ಕೂಡಿರುತ್ತದೆ ಎಂದು ಈ ಭಾಗದ ಅನೇಕ ಮಹಿಳೆಯರು ಆರೋಪಿಸಿದ್ದಾರೆ.

ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪ್ರಕ್ರಿಯೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯ ಮಟ್ಟದಲ್ಲಿ ಟೆಂಡರ್ ನಡೆದು ಈ ಟೆಂಡರ್ ಅನ್ನು ವಿಜಯಪುರ ಜಿಲ್ಲೆಯ ತಾಳಿಕೋಟಿಯ ತಾಲೂಕಿನವರು ಪಡೆದಿರುತ್ತಾರೆ. ಈ ಬಾರಿ ವಿತರಣೆ ಮಾಡಿರುವ ಮೊಟ್ಟೆಗಳ ಗುಣಮಟ್ಟವು ತೀರ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಉತ್ತಮವಾದ ಮೊಟ್ಟೆಗಳನ್ನು ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ನೋಟೀಸ್ ಜಾರಿ: ಈಗಾಗಲೇ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಕುಶಾಲನಗರ ತಾಲೂಕು, ಸೋಮವಾರಪೇಟೆ ತಾಲೂಕಿನಲ್ಲಿ ಕೆಲವು ಭಾಗಗಳ ಅಂಗನವಾಡಿ ಕೇಂದ್ರಗಳಿಗೆ ಟೆಂಡರ್‌ದಾರ ವಿತರಣೆ ಮಾಡಿರುವ ಬಗ್ಗೆ ಜಿಲ್ಲಾ ಮಟ್ಟದ ಕಚೇರಿಗೆ ದೂರು ಬಂದ ಹಿನ್ನೆಲೆಯಲ್ಲಿ ಟೆಂಡರ್‌ದಾರನಿಗೆ ಇಲಾಖೆ ವತಿಯಿಂದ ನೋಟೀಸ್ ನೀಡಲಾಗಿದೆ. ಅಲ್ಲದೆ ಬದಲಿ ಮೊಟ್ಟೆಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ.

- ನಾಗರಾಜಶೆಟ್ಟಿ