ಶನಿವಾರಸಂತೆ, ಜು. ೧೨: ಹೋಬಳಿ ವ್ಯಾಪ್ತಿಯ ಬಸವನಕೊಪ್ಪ ಗ್ರಾಮದ ಪಕ್ಕದ ಗಡಿಭಾಗ ಹನಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇದೇ ಶಾಲೆಯಲ್ಲಿ ಕಲಿತು ಪ್ರಸ್ತುತ ವಿದೇಶದಲ್ಲಿ ಶಿಕ್ಷಕಿಯಾಗಿರುವ ಸಿಸ್ಟರ್ ಪ್ರಸಿಲ್ಲಾ ಬರೆಯುವ ಪುಸ್ತಕ, ಲೇಖನಿ, ಇತ್ಯಾದಿ ಪರಿಕರಗಳನ್ನು ವಿತರಿಸಿದರು.
ನಂತರ ನಡೆದ ಸಭೆಯಲ್ಲಿ ಪ್ರಸಿಲ್ಲಾ ಮಾತನಾಡಿ, ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದು, ಇಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಹೊರದೇಶ ಕೀನ್ಯಾದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವೆ. ನಾನು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡುತ್ತಿರುವೆ. ಚೆನ್ನಾಗಿ ಕಲಿವ ವಿದ್ಯಾರ್ಥಿಯ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಶಿಕ್ಷಣವೇ ಭದ್ರ ಅಡಿಪಾಯ ಎಂದರು.
ಸೋಮವಾರಪೇಟೆ ಕರವೇ ತಾಲೂಕು ಘಟಕದ ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಮಾತನಾಡಿ, ಕರವೇ ಪ್ರತಿ ವರ್ಷದಂತೆ ಈ ಬಾರಿಯೂ ದಾನಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಇತರ ಪರಿಕರಗಳನ್ನು ವಿತರಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಚೆನ್ನಾಗಿ ಓದಲು ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಪುಸ್ತಕ, ಇತರ ಪರಿಕರಗಳನ್ನು ವಿತರಿಸುವುದು ಎಂದರು.
ಮುಖ್ಯಶಿಕ್ಷಕಿ ಮಂಜುಳಾ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಕಲಿತು ವಿದೇಶದಲ್ಲಿ ಶಿಕ್ಷಕಿಯಾಗಿದ್ದರೂ ಕಲಿತ ಶಾಲೆಯನ್ನು ಸ್ಮರಿಸಿ ಬಂದಿರುವ ಪ್ರಸಿಲ್ಲಾ ಸಂಸ್ಕಾರ ಅನುಕರಣೀಯ ಎಂದು ಹೇಳಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಗ್ರಾಮ ಪ್ರಮುಖರು, ಶಿಕ್ಷಕರು ಹಾಜರಿದ್ದರು.