ವೀರಾಜಪೇಟೆ, ಜು. ೧೦: ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವನಜಾಕ್ಷಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನಾಯಕತ್ವ, ಜವಾಬ್ದಾರಿ, ನೈತಿಕ ಮೌಲ್ಯಗಳು ಬೆಳೆಯಲು ವಿದ್ಯಾರ್ಥಿ ಸಂಘ ಅತಿ ಅಗತ್ಯ ಎಂದು ಹೇಳಿದರು.

ವಿದ್ಯಾಸಂಸ್ಥೆಯ ಸಹಾಯಕ ಗುರುಗಳಾದ ರೆವೆರೆಂಡ್ ಫಾದರ್ ಯೇಸುಪ್ರಸಾದ್ ಮಾತನಾಡಿ ಶಾಲೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿ ಸಂಘ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವನಜಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮಂತ್ರಿ ಮಂಡಲದಲ್ಲಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು.

ಸಮಾರಂಭದಲ್ಲಿ ಶಾಲಾ ವ್ಯವಸ್ಥಾಪಕರಾದ ರೆವೆರೆಂಡ್ ಫಾದರ್ ಐಸಾಕ್ ರತ್ನಾಕರ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್, ಪ್ರಾಥಮಿಕ ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ರೋಜಿ, ಪ್ರಾಥಮಿಕ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೇಮ, ಹೈಡ ಡಿಸೋಜಾ, ವಿದ್ಯಾರ್ಥಿ ಸಂಘದ ಅಧ್ಯಕ್ಷರು ದಿವ್ಯಡಿನಾ ಸಾಲ್ಡಾನ, ಗೌರವಾನ್ವಿತ ಅಧ್ಯಕ್ಷ ವೈಲೆಟ್ ಕ್ರಾಸ್ತಾ, ಕಾರ್ಯದರ್ಶಿ ಪಿ.ಪಿ ಗಂಗಾಧರ್, ವಿದ್ಯಾರ್ಥಿ ಅಧ್ಯಕ್ಷ ಹರಿಕೃಷ್ಣನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಟೀನಾ ಫರ್ನಾಂಡಿಸ್ ಸ್ವಾಗತಿಸಿದರೆ, ದಿವ್ಯ ಪ್ರಮಾಣವಚನವನ್ನು ಬೋಧಿಸಿದರು. ಸಂಘದ ಕಾರ್ಯದರ್ಶಿ ಗಂಗಾಧರ್ ವರದಿ ವಾಚಿಸಿದರೆ, ಸಲೋಮಿ ನಿರೂಪಿಸಿ, ಜಸ್ಮಿತ ವಂದಿಸಿದರು.