ಏರೋನಿಕ್ಸ್ ಕಂಪೆನಿ ಸಿಇಓ, ಎಂಡಿ ಬರ್ಬರ ಹತ್ಯೆ

ಬೆಂಗಳೂರು, ಜು. ೧೧: ರಾಜಧಾನಿ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಹಾಡುಹಗಲೇ ಜೋಡಿ ಕೊಲೆ ನಡೆದಿದ್ದು, ಏರೋನಿಕ್ಸ್ ಇಂಟರ್‌ನೆಟ್ ಕಂಪೆನಿಯ ಸಿಇಓ ಹಾಗೂ ಎಂಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಏರೋನಿಕ್ಸ್ ಇಂಟರ್ನೆಟ್ ಕಂಪೆನಿಯ ಸಿಇಓ ವಿನುಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಮಣ್ಯ ಅವರನ್ನು ತಲ್ವಾರ್‌ನಿಂದ ಚುಚ್ಚಿ, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇಂದು ಸಂಜೆ ೪ ಗಂಟೆಯ ಸುಮಾರಿಗೆ ಕಂಪೆನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ: ಸಿಎಂ

ಬೆAಗಳೂರು, ಜು. ೧೧: ಜೈನ ಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಪ್ರಕರಣದ ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ಜೈನಮುನಿ ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೈನ ಮುನಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ. ಜೈನ ಮುನಿಯ ಹತ್ಯೆ ಅಮಾನುಷ ಕಗ್ಗೊಲೆಯಾಗಿದೆ. ಇಬ್ಬರು ಆರೋಪಿಗಳ ಹೆಸರು ಎಫ್‌ಐಆರ್‌ನಲ್ಲಿ ಇದೆ. ಇಬ್ಬರು ಆರೋಪಿಗಳ ಬಂಧನವೂ ಆಗಿದೆ. ಮೃತದೇಹವನ್ನು ಪತ್ತೆ ಹಚ್ಚಲಾಗಿದೆ. ಜೈನ ಮುನಿಗಳ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಇದರ ಹಿಂದೆ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಸಿಎಂ ಭರವಸೆ ನೀಡಿದರು. ಟಿ. ನರಸೀಪುರದಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷö್ಯ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ಹನುಮ ಜಯಂತಿಗೆ ಸರಿಯಾದ ಬಂದೋಬಸ್ತ್ ಮಾಡಲಾಗಿತ್ತು. ಹಳೆ ವೈಷಮ್ಯದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಬಿಜೆಪಿಯಿAದ ೨ ಸತ್ಯಶೋಧನಾ ತಂಡ ರಚನೆ

ಬೆಂಗಳೂರು, ಜು. ೧೧: ಬೆಳಗಾವಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣ ಹಾಗೂ ಮೈಸೂರಿನ ತಿ.ನರಸಿಪುರದಲ್ಲಿ ನಡೆದ ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಗಳಿಗೆ ಸಂಬAಧಿಸಿದAತೆ ಬಿಜೆಪಿ ಸತ್ಯ ಶೋಧನ ತಂಡವನ್ನು ರಚಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ. ರವಿ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಘಟನೆಗಳ ಸತ್ಯವನ್ನು ತಿಳಿಯುವ ಕೆಲಸ ಮಾಡಲಿದೆ ಎಂದು ಪಕ್ಷ ತಿಳಿಸಿದೆ. ಕಟೀಲ್ ನೇತೃತ್ವದಲ್ಲಿ ೧೧ ಮಂದಿ ಕಾರ್ಯನಿರ್ವಹಿಸಲಿದ್ದರೆ, ಸಿಟಿ ರವಿ ನೇತೃತ್ವದಲ್ಲಿ ೧೦ ಸದಸ್ಯರು ಇರಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಮಳೆಗೆ ಉತ್ತರ ಭಾರತ ಜರ್ಝರಿತ: ಮೃತರ ಸಂಖ್ಯೆ ೩೭ಕ್ಕೆ ಏರಿಕೆ

ನವದೆಹಲಿ, ಜು. ೧೧: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಭಾರತ ಜರ್ಝರಿತಗೊಂಡಿದೆ. ಕೆಲ ಭಾಗಗಳಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು, ಹೆಚ್ಚಿನ ಸಾವು ಮತ್ತು ವಿನಾಶವನ್ನು ಉಂಟುಮಾಡಿದೆ. ಕಳೆದೆರಡು ದಿನಗಳಲ್ಲಿ ಉಂಟಾದ ಭೂಕುಸಿತ ಮತ್ತು ಇತರ ಮಳೆ ಸಂಬAಧಿತ ಘಟನೆಗಳಲ್ಲಿ ೩೭ ಜನರು ಸಾವನ್ನಪ್ಪಿದ್ದಾರೆ, ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳೊAದಿಗೆ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ಮತ್ತು ಬೆಂಬಲದ ಭರವಸೆ ನೀಡಿದ್ದಾರೆ.

ಕಾಲುವೆಗೆ ಬಿದ್ದ ಬಸ್, ೭ ಮಂದಿ ದುರ್ಮರಣ

ಪ್ರಕಾಶಂ (ಆಂಧ್ರ ಪ್ರದೇಶ), ಜು. ೧೧: ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ೭ ಮಂದಿ ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ. ಅಪಘಾತಕ್ಕೀಡಾದ ಸಂದರ್ಭದಲ್ಲಿ ಬಸ್‌ನಲ್ಲಿ ೪೭ ಮಂದಿ ಇದ್ದರು ಎಂದು ತಿಳಿದುಬಂದಿದೆ. ಈ ಪೈಕಿ ೭ ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದವರು ಮದುವೆ ಆರತಕ್ಷತೆಗಾಗಿ ಕಾಕಿನಾಡಕ್ಕೆ ತೆರಳಲು ಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್ ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತರನ್ನು ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (೬೫), ಅಬ್ದುಲ್ ಹನಿ (೬೦), ಶೇಖ್ ರಮೀಜ್ (೪೮), ಮುಲ್ಲಾ ನೂರ್ಜಹಾನ್ (೫೮), ಮುಲ್ಲಾ ಜಾನಿ ಬೇಗಂ (೬೫), ಶೇಖ್ ಶಬೀನಾ (೩೫) ಮತ್ತು ಶೇಖ್ ಹೀನಾ (೬) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ೪೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.