ಸೋಮವಾರಪೇಟೆ, ಜು. ೧೦ : ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನ ೧೨ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಸದ್ಯ ಬೀಳುತ್ತಿರುವ ಆಶಾದಾಯಕ ಮಳೆಯಿಂದಾಗಿ ಕೃಷಿ ಕಾರ್ಯ ಚುರುಕುಗೊಂಡಿದೆ. ರೈತಾಪಿ ವರ್ಗ ಗದ್ದೆ ಕೆಲಸದಲ್ಲಿ ಮಗ್ನವಾಗಿದ್ದು, ಉಳುಮೆ, ನಾಟಿ ಕಾರ್ಯ ಬಿರುಸುಗೊಂಡಿದೆ.
ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಪ್ರಧಾನ ಗ್ರಾಮಗಳಲ್ಲಿ ಗದ್ದೆ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಯ ಹೆಗ್ಗಡಮನೆ, ಕುಮಾರಳ್ಳಿ, ಬೀದಳ್ಳಿ, ಕೊತ್ನಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ಬೆಟ್ಟದಕೊಪ್ಪ, ತಡ್ಡಿಕೊಪ್ಪ, ಹರಗ, ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅಂತೆಯೇ ಗೌಡಳ್ಳಿ, ದೊಡ್ಡಮಳ್ತೆ, ಶನಿವಾರಸಂತೆ, ಕೊಡ್ಲಿಪೇಟೆ, ಕಿರಗಂದೂರು, ಮಾದಾಪುರ, ಐಗೂರು, ಗಣಗೂರು, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಕೃಷಿ ಕಾರ್ಯ ಭರದಿಂದ ಸಾಗುತ್ತಿದೆ.
ಸೋಮವಾರಪೇಟೆ ತಾಲೂಕಿನ ೧೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಏಕರೆಯಲ್ಲಿ ೧೬ ರಿಂದ ೧೮ ಕ್ವಿಂಟಾಲ್ ಫಸಲು ನಿರೀಕ್ಷಿಸಲಾಗಿದೆ. ೩,೬೦೦ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, ಬಾಳೆ, ಶುಂಠಿ ಬೆಳೆಯುವ ಗುರಿ ಹೊಂದಲಾಗಿದೆ.
ಹಿಂಗಾರಿನಲ್ಲಿ ೫೦೦ ರಿಂದ ೬೦೦ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ, ೬೦ ಹೆಕ್ಟೇರ್‌ನಲ್ಲಿ ಹೊಗೆ ಸೊಪ್ಪು, ೬೦ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗುತ್ತದೆ. ಕಳೆದ ವರ್ಷ ಜನವರಿಯಿಂದ ಜುಲೈ ೧ರ ವರೆಗೆ ೭೪೦ ಮಿ.ಮೀಟರ್ ಮಳೆಯಾಗಿದ್ದು, ಪ್ರಸಕ್ತ ವರ್ಷ ಅರ್ಧಕ್ಕಿಂತಲೂ ಕಡಿಮೆ(೩೩೦) ಮಿ.ಮೀಟರ್ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊಡಗಿನ ಸೋಮವಾರಪೇಟೆ ಭಾಗದಲ್ಲಿ ಪ್ರಸಕ್ತ ವರ್ಷ ವಾಡಿಕೆಯ ಮಳೆ ದೂರವಾಗಿದ್ದು, ಒಂದು ತಿಂಗಳ ನಂತರ ಮಳೆಗಾಲ ಆರಂಭವಾಗಿದೆ. ಇದು ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದ್ದು, ಭತ್ತ ಕೊಯ್ಲು ಸಂದರ್ಭವೂ ಮಳೆ ಮುಂದುವರೆದರೆ ನಿರೀಕ್ಷಿತ ಪ್ರಗತಿ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಪ್ರಸ್ತುತ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಗದ್ದೆಗಳಲ್ಲಿ ತೇವಾಂಶ ಹೆಚ್ಚಿದ್ದು, ಉಳುಮೆ, ಸಸಿಮಡಿ ತಯಾರಿ, ಬಿತ್ತನೆ, ನಾಟಿ ಕಾರ್ಯಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಮಳೆ ದೂರವಾದ ಸಂದರ್ಭ ಇತರ ಮೂಲಗಳಿಂದ ನೀರಿನ ಸೌಕರ್ಯ ಪಡೆದಿದ್ದ ರೈತರು ಸಸಿಮಡಿ ತಯಾರಿ ಮಾಡಿಕೊಂಡಿದ್ದು, ಇದೀಗ ನಾಟಿ ಕಾರ್ಯಕ್ಕೆ ಇಳಿದಿದ್ದಾರೆ.
ಗದ್ದೆಗಳನ್ನು ಉಳುಮೆ ಕಾರ್ಯಕ್ಕೆ ಸಿದ್ದಪಡಿಸುವ ಸಂಬAಧ ಕೆಲ ರೈತರು ಟ್ರಾö್ಯಕ್ಟರ್, ಟಿಲ್ಲರ್‌ಗಳ ಮೊರೆ ಹೋಗಿದ್ದಾರೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಸಾಂಪ್ರದಾಯಿಕ ಜೋಡೆತ್ತುಗಳನ್ನು ಅವಲಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯ ಚುರುಕುಗೊಂಡಿದೆ.