ಮಡಿಕೇರಿ, ಜು. ೧೦: ಕರ್ನಾಟಕ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ೫ ಕೆಜಿ ಅಕ್ಕಿಯ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ. ಜಿಲ್ಲೆಯ ಅನ್ನಭಾಗ್ಯ ಫಲಾನುಭವಿಗಳಿಗೆ ಜುಲೈ ತಿಂಗಳ ಅಂತ್ಯದೊಳಗೆ ಹಣ ಖಾತೆಗೆ ವರ್ಗಾವಣೆಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ತಾ. ೧೦ ರಂದು ಸಂಜೆ ೫ ಗಂಟೆಗೆ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಮಾತ್ರ ಹಣ ಸಂದಾಯವಾಗಲಿದೆ. ಕೊಡಗು ಜಿಲ್ಲೆಯ ಫಲಾನುಭವಿಗಳಿಗೆ ಜುಲೈ ಅಂತ್ಯದೊಳಗೆ ಹಣ ದೊರೆಯಲಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಜಿಲ್ಲೆಯಿಂದ ಅರ್ಹರ ಪಟ್ಟಿ ರವಾನೆಯಾಗಿದೆ. ಜಿಲ್ಲೆಯಲ್ಲಿ ೧,೦೧,೬೬೬ ಬಿಪಿಎಲ್ ಕಾರ್ಡ್ಗಳಿದ್ದು, ೩,೦೮,೩೬೧ ಮಂದಿ ಅನ್ನಭಾಗ್ಯಕ್ಕೆ ಫಲಾನುಭವಿಗಳಾಗಿದ್ದಾರೆ. ಅದೇ ರೀತಿ ಅಂತ್ಯೋದಯ ಕಾರ್ಡ್ ೯,೮೮೦ ಕಾರ್ಡ್ಗಳಿದ್ದು, ಈ ವ್ಯಾಪ್ತಿಗೆ ೩೨,೨೨೩ ಮಂದಿ ಬರುತ್ತಾರೆ. ಆದರೆ, ಅಂತ್ಯೋದಯ ಫಲಾನುಭವಿಗಳ ಕಾರ್ಡ್ನಲ್ಲಿ ಕನಿಷ್ಟ ೩ ಮಂದಿ ಇದ್ದರೆ ಮಾತ್ರ ಹಣ ಪಡೆಯಲು ಅರ್ಹರಾಗಿರುತ್ತಾರೆ.

೫ ಕೆಜಿ ಅಕ್ಕಿ ಬದಲಿಗೆ ಪ್ರತಿ ಫಲಾನುಭವಿ ಖಾತೆಗೆ ರೂ. ೧೭೦ ಸಂದಾಯವಾಗಲಿದ್ದು, ಉಳಿದ ೫ ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ನೇರ ವರ್ಗಾವಣೆ (ಡಿಬಿಟಿ) ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆಗೊಳ್ಳಲಿದೆ.