ಕಡಂಗ, ಜು. ೮: ಕಳೆದ ನಾಲ್ಕು ದಿನಗಳ ಧಾರಾಕಾರ ಮಳೆ ಯಿಂದ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮೂರೂರು ಹಾಗೂ ಕೆದಮುಳ್ಳೂರು ಮುಖ್ಯ ರಸ್ತೆಯಲ್ಲಿ ಸಂಚಾರ ದುಸ್ತರ ವಾಗಿದೆ. ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ವ್ಯವಸ್ಥೆಯು ಇಲ್ಲದೆ ಚಿಕ್ಕ ಮಳೆಗೆ ಪೂರ್ತಿ ನೀರು ನಿಂತು ಸಂಚಾರ ಮಾಡಲು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರಭಸವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ

ಕೆದಮುಳ್ಳೂರು, ಚೌಕಿ ಭಾಗದಿಂದ ಬರುವ ವಿದ್ಯಾರ್ಥಿಗಳು, ದಿನನಿತ್ಯ ಕೆಲಸಕೆ ತೆರಳುವ ಕೆಲಸಗಾರರು, ಆಸ್ಪತ್ರೆಗೆ ಹೋಗುವ ಅನಾರೋಗ್ಯ ಪೀಡಿತ ಜನರು ಈ ಒಂದು ರಸ್ತೆಯನ್ನು ದಾಟಲು ಸರ್ಕಸ್ ಮಾಡುವ ಸ್ಥಿತಿ ಸೃಷ್ಟಿಯಾಗಿದೆ. ಈ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಈ ಪರಿಸ್ಥಿತಿಯಿಂದ ಆಟೋ ಚಾಲಕರು ಕೂಡ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿರುವ ಪ್ರಮುಖರು ಹಲವು ಬಾರಿ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರು ಯಾವುದೇ ರೀತಿಯ ಸ್ಪಂದನ ದೊರೆತಿಲ್ಲ.

ಹಲವು ಬಾರಿ ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದರೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನ ದೊರೆಯದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನೂತನ ಶಾಸಕರುಗಳು ರಸ್ತೆಯನ್ನು ಸರಿಪಡಿಸಲು ಕ್ರಮ ವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಅದೇ ರೀತಿ ರಸ್ತೆಯ ಎರಡು ಬದಿಗಳಲ್ಲಿರುವ ತೋಟದಲ್ಲಿರುವ ಮರದ ಕೊಂಬಗಳು ಸಹ ಬೀಳುವ ಸ್ಥಿತಿಯಲ್ಲಿದ್ದು ಕಳೆದ ೪ ತಿಂಗಳ ಹಿಂದೆ ಹಲವು ವಿದ್ಯುತ್ ಕಂಬಗಳಿಗೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ. ಜನಪ್ರತಿನಿಧಿಗಳು ಹೆಚ್ಚಿನ ಒತ್ತು ನೀಡಿ ಹದಗೆಟ್ಟ ರಸ್ತೆಯನ್ನು ಸರಿಪಡಿಸಿ ಚರಂಡಿ ವ್ಯವಸ್ಥೆಯನ್ನು ಮಾಡಿ ಸಹಕರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿರುವ ೧೫೦ ಕಿಂತ ಹೆಚ್ಚು ವಿದ್ಯಾರ್ಥಿಗಳು ಕಷ್ಟಪಟ್ಟು ಈ ರಸ್ತೆಯನ್ನು ದಾಟುತ್ತಿದ್ದಾರೆ. ಕೂಡಲೇ ಈ ರಸ್ತೆಯನ್ನು ಸರಿಪಡಿಸಬೇಕಾಗಿ ಗ್ರಾಮಸ್ಥ ಅಬ್ದುಲ್ ರಹಮಾನ್ ಒತ್ತಾಯಿಸಿದ್ದಾರೆ. - ನೌಫಲ್