ಮಡಿಕೇರಿ, ಜು. ೮: ಬಲ್ಲಮಾವಟಿಯಿಂದ ನೆಲಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಲಾಗಿದ್ದು, ಈಗ ಸುರಿಯುತ್ತಿರುವ ಮಳೆಗೆ ರಸ್ತೆ ಅಪಾಯದಂಚಿನಲ್ಲಿವೆ. ಅಲ್ಲಿನ ಅಪ್ಪುಮಣಿಯಂಡ, ಕೈಬುಲಿರ ಕುಟುಂಬದ ಮನೆಗಳಿಗೆ ತೆರಳುವ ಈ ರಸ್ತೆಯನ್ನು ರೂ. ೧.೪೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಅಗತ್ಯ ಇರುವ ಕಡೆ ತಡೆಗೋಡೆಯನ್ನು ನಿರ್ಮಿಸಿಲ್ಲ. ಇದರಿಂದಾಗಿ ಮಳೆಗೆ ಮಣ್ಣು ಜರಿಯುತ್ತಿದ್ದು, ರಸ್ತೆ ಕುಸಿಯುವ ಅಪಾಯದಲ್ಲಿದೆ. ಅಲ್ಲದೆ ಜರಿಯುತ್ತಿರುವ ಮಣ್ಣು ಕೆಳಭಾಗದ ಚರಂಡಿಯಲ್ಲಿ ತುಂಬಿ ಅಲ್ಲಿಯೂ ಸರಾಗವಾಗಿ ನೀರು ಹರಿಯದೇ ಇನ್ನಷ್ಟು ಸಮಸ್ಯೆವಾಗುತ್ತಿದೆ.

ಈ ಬಗ್ಗೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರಾದ ನಾಗರಾಜು ಅವರು ಗಮನಕ್ಕೆ ಈ ಹಿಂದೆಯೇ ತರಲಾಗಿದೆ. ಆದರೆ, ತಡೆಗೋಡೆ ನಿರ್ಮಿಸುವುದಾಗಿ ಅವರು ಹೇಳಿದ್ದರಾದರೂ ಈತನಕ ಈ ಬಗ್ಗೆ ಗಮನ ಹರಿಸಿಲ್ಲ. ಮಳೆಯಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಮುಂಚೆ ಈ ಬಗ್ಗೆ ಸಂಬAಧಿಸಿದ ಗುತ್ತಿಗೆದಾರರು, ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.