ಸೋಮವಾರಪೇಟೆ, ಜು. ೮: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ರೈತರ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರೊಂದಿಗೆ ತಾ. ೧೦ರಂದು (ನಾಳೆ) ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್‌ಕುಮಾರ್ ತಿಳಿಸಿದ್ದಾರೆ.

ತಾಲೂಕು ಕಚೇರಿಯಲ್ಲಿ ರೈತರ ಜಮೀನಿನ ಪೋಡಿ ದುರಸ್ತಿ ಮಾಡಲು ವಿಳಂಬ ವರ್ಷಾನುಗಟ್ಟಲೆ ಆಗುತ್ತಿದೆ. ಹಣ ನೀಡಿದವರ ಜಮೀನಿನ ಪೋಡಿ ಮಾತ್ರ ದುರಸ್ತಿಯಾಗುತ್ತಿದೆ. ತಾಲೂಕು ಕಚೇರಿ, ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ವರ್ಷಗಟ್ಟಲೆ ಕಡತಗಳನ್ನು ಇಟ್ಟುಕೊಂಡಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಅನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸಬೇಕು. ಹಿಂದಿನ ಅಕ್ರಮ ಸಕ್ರಮ ಸಮಿತಿಯಲ್ಲಿ ಕೆಲವರಿಗೆ ಮಾತ್ರ ಸಿ. ಮತ್ತು ಡಿ ಜಾಗಕ್ಕೆ ಭೂ ಮಂಜೂರಾತಿ ನೀಡಿದ್ದು, ಅದೇ ನಿಯಮದಲ್ಲಿ ಇತರರಿಗೂ ಭೂ ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ, ರೈತರ ಹಿತಕ್ಕಾಗಿ ತಾ.೧೦ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಚೇರಿ ಎದುರು ಪಕ್ಷಾತೀತ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.