ಮಡಿಕೇರಿ, ಜು. ೮: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಓ, ಕಾರ್ಯದರ್ಶಿ ಹಾಗೂ ಕರವಸೂಲಿಗಾರರನ್ನು ನೇಮಿಸದಿದ್ದಲ್ಲಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆದಮುಳ್ಳೂರು ಗ್ರಾ.ಪಂ ಸದಸ್ಯ ಎಂ.ಎA.ಪರಮೇಶ್ವರ್ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಂಗಾಮಿ ಕಾರ್ಯದರ್ಶಿಯಾಗಿ ಪಿ.ಎಸ್.ಸತೀಶ್ ಅವರನ್ನು ನೇಮಿಸಲಾಗಿತ್ತು. ಇವರು ವಾರದಲ್ಲಿ ಮೂರು ದಿನದಂತೆ ಗ್ರಾ.ಪಂ ಕಚೇರಿಗೆ ಆಗಮಿಸಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆ ಕಚೇರಿ ಕೆಲಸಗಳು ವಿಳಂಬವಾಗುವುದರ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಪಿಡಿಓ, ಕಾರ್ಯದರ್ಶಿ ಹಾಗೂ ಕರವಸೂಲಿಗಾರರನ್ನು ನೇಮಕ ಮಾಡದಿದ್ದಲ್ಲಿ ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆದಮುಳ್ಳೂರು ಗ್ರಾ.ಪಂ ವಿಸ್ತೀರ್ಣದಲ್ಲಿ ದೊಡ್ಡ ಗ್ರಾಮವಾಗಿದೆ. ಬೆಟ್ಟಗುಡ್ಡಗಳಿಂದ ಕೂಡಿದ್ದು, ಪ್ರಕೃತಿ ವಿಕೋಪದಡಿ ಹಲವು ಸಮಸ್ಯೆ ಎದುರಿಸುತ್ತಿದೆ. ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗುವ ದೃಷ್ಠಿಯಿಂದ ಕೂಡಲೇ ಖಾಯಂ ಪಿಡಿಓ, ಕಾರ್ಯದರ್ಶಿ ಹಾಗೂ ಕರವಸೂಲಿ ಗಾರರನ್ನು ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷೆ ಶೀಲಾ ಮೇದಪ್ಪ ಮಾತನಾಡಿ, ಗ್ರಾ.ಪಂ.ನಲ್ಲಿ ೧೩ ಸದಸ್ಯರಿದ್ದೇವೆ. ವರ್ಗಾವಣೆ ಕುರಿತು ಯಾರಿಗೂ ಮಾಹಿತಿಯಿಲ್ಲ. ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಇದರಿಂದ ಕಚೇರಿ ಕೆಲಸಗಳು ಹಾಗೆ ಉಳಿದುಕೊಂಡಿದೆ. ಪ್ರಬಾರ ಪಿಡಿಓ ಇರುವುದರಿಂದ ಸಾರ್ವಜನಿಕರ ಎಲ್ಲಾ ಅಹವಾಲುಗಳನ್ನು ಆಲಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆದಮುಳ್ಳೂರು ಗ್ರಾ.ಪಂ ಉಪಾಧ್ಯಕ್ಷೆ ಎಂ.ಬಿ.ಮೀನಾಕ್ಷಿ, ಸದಸ್ಯರಾದ ಎಂ.ಜೆ.ಮುತ್ತಪ್ಪ, ಪಿ.ಜೆ.ಜಯಂತಿ ಉಪಸ್ಥಿತರಿದ್ದರು.