ಸಿದ್ದಾಪುರ, ಜು. ೮ : ಕೃಷಿ ಗದ್ದೆಗೆ ಕೊಳಚೆ ನೀರು ಹರಿಬಿಟ್ಟ ಗ್ರಾ.ಪಂ. ವಿರುದ್ಧ ಕೃಷಿಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೆಟ್ಟದ ಕಾಡು ವ್ಯಾಪ್ತಿಯ ಸತ್ಯನಾರಾಯಣ ದೇವಸ್ಥಾನ ಬಳಿಯ ಜಯಕುಮಾರ್, ಮಾನಸ ಎಂಬವರ ಗದ್ದೆಗಳಿಗೆ ಸಮೀಪದ ಎಂ.ಜಿ. ಕಾಲೋನಿಯಿಂದ ಚರಂಡಿ ಮೂಲಕ ಕೊಳಚೆ ನೀರು ಹರಿಬಿಟ್ಟ ಪರಿಣಾಮ ಇದೀಗ ಕೃಷಿ ಗದ್ದೆಗಳು ಕೊಳಚೆ ನೀರಿನಿಂದ ಆವೃತ್ತವಾಗಿದ್ದು, ಕೃಷಿಗೆ ಯೋಗ್ಯವಲ್ಲದಂತಾಗಿದೆ ಎಂದು ಕೃಷಿಕರು ಆರೋಪಿಸಿದ್ದಾರೆ.

ಕೃಷಿಕ ಕೆ.ಎಂ. ಜಯಕುಮಾರ್ ಮಾತನಾಡಿ, ಈ ಭಾಗದಲ್ಲಿ ಹಲವು ವರ್ಷಗಳಿಂದ ಭತ್ತ ಬೆಳೆಯಲಾಗುತ್ತಿತ್ತು. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಂ.ಜಿ. ಕಾಲೋನಿ ಹಾಗೂ ಇತರಡೆಗಳಿಂದ ಸಂಗ್ರಹವಾದ ಕೊಳಚೆ ನೀರು ಮತ್ತು ಮಳೆಯ ನೀರು ಬೃಹತ್ ಪ್ರಮಾಣದಲ್ಲಿ ಹರಿದು ಭತ್ತ ಬೆಳೆಯುವ ಗದ್ದೆಗಳಲ್ಲಿ ಸಂಗ್ರಹವಾಗುತ್ತಿದೆ. ನೀರಿನೊಂದಿಗೆ ತ್ಯಾಜ್ಯಗಳು ಗದ್ದೆಯನ್ನು ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಭತ್ತ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಕ್ರಮ ಜರುಗಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರುವುದಿಲ್ಲ ಎಂದು ಅಳಲು ತೋಡಿಕೊಂಡರು.

ಈ ಕುರಿತು ಕೆ.ಸಿ. ಮಾನಸ ಮಾತನಾಡಿ, ಕೊಳಚೆ ನೀರು ಹರಿಯುವ ತೋಡಿಗೆ ಅಡ್ಡಲಾಗಿ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕೆಲವು ತಿಂಗಳುಗಳ ಹಿಂದೆ ಗ್ರಾಮ ಪಂಚಾಯಿತಿಯು ಅದನ್ನು ಕೆಡವಿ ಹಾಕಿದ ಕಿರುಸೇತುವೆ ಮರು ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಇಂದಿನವರೆಗೂ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷö್ಯ ತೋರಿದ್ದಾರೆ. ಈ ಭಾಗದ ಕೃಷಿಕರಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ. ಈ ಕುರಿತು ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರು ಕಿರುಸೇತುವೆ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗದ್ದೆಗಳಿಗೆ ಹರಿಯುವ ಕೊಳಚೆ ನೀರು ತಡೆಗೆ ಕ್ರಮ ಹಾಗೂ ಕಿರುಸೇತುವೆ ಮರು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಈ ಭಾಗದ ಕೃಷಿಕರನ್ನು ಒಗ್ಗೂಡಿಸಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿಕ ಕೆ.ಎಂ. ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.