ಕೂಡಿಗೆ, ಜು. ೭: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಿರು ಸೇತುವೆಯು ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ಹರಿಸಿದಾಗ ಸೇತುವೆಯು ಮುಳುಗಡೆಗೊಳ್ಳುವುದು, ಅಲ್ಲದೆ ಸೋಮವಾರಪೇಟೆ ಕುಶಾಲನಗರ ಸಂಪರ್ಕವು ಕಡಿತಗೊಳ್ಳುವ ಹಿನ್ನೆಲೆಯಲ್ಲಿ ನೂತನವಾಗಿ ಸೇತುವೆ ನಿರ್ಮಾಣಕ್ಕೆ ಹಾರಂಗಿ ನೀರಾವರಿ ಇಲಾಖೆಯ ಮೂಲಕ ರೂ. ೫೦ ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ಸೂಚನೆಯಂತೆ ಹಾರಂಗಿಯ ನೀರಾವರಿ ಇಲಾಖೆಯ ಅಧಿಕಾರಿಗಳು ಅಣೆಕಟ್ಟೆಯ ಮುಂಭಾಗದ ಸೇತುವೆಯ ನಿರ್ಮಾಣಕ್ಕೆ ಬೇಕಾಗುವ ಕಾಮಗಾರಿಯ ಕ್ರಿಯಾ ಯೋಜನೆಯ ಅನುಗುಣವಾಗಿ ಕ್ರಿಯಾ ಯೋಜನೆಯ ಅಂದಾಜು ಪಟ್ಟಿಯ ಪ್ರಕಾರ ರೂ. ೫೦ ಕೋಟಿಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೂ, ರಾಜ್ಯ ಮಟ್ಟದ ಕಾವೇರಿ ನೀರಾವರಿ ನಿಗಮಕ್ಕೆ ಪ್ರಸ್ತಾವನೆಯನ್ನು ಕಳುಹಿಸುವ ಕ್ರಮವನ್ನು ತೆಗೆದುಕೊಂಡಿದ್ದಾರೆ. ಕಳೆದ ೫ ವರ್ಷಗಳಿಂದ ಹಿಂದಿನಿAದಲೂ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸಿದಾಗ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಗಳು, ಅಲ್ಲದೇ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ನದಿಗೆ ಹರಿಯುವುದನ್ನು ಸಾರ್ವಜನಿಕರು ಮತ್ತು ಪ್ರವಾಸಿಗರು ವೀಕ್ಷಣೆ ಮಾಡಲು ಅನುಕೂಲಕರ ಎಂಬ ದೃಷ್ಟಿಯಿಂದ ಈ ಯೋಜನೆಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಕಳುಹಿಸಲು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ