'

ಮಡಿಕೇರಿ, ಜು. ೭: ಕೊಡಗು ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದೆ. ಆದರೆ ಬುಧವಾರ ಹಾಗೂ ಗುರುವಾರದಂದು ಕಂಡು ಬಂದಿದ್ದ ಮಳೆಯ ಅಬ್ಬರ ಶುಕ್ರವಾರದಂದು ತುಸು ಇಳಿಮುಖಗೊಂಡಿತ್ತು. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆ ೮ ಗಂಟೆಯತನಕ ಜಿಲ್ಲೆಯಲ್ಲಿ ಸರಾಸರಿ ೩.೩೫ ಇಂಚುಗಳಷ್ಟು ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ೯.೧೦ ಇಂಚಿನಷ್ಟು ಭಾರೀ ಮಳೆಯಾಗಿತ್ತು.

ಎರಡು ದಿನಗಳ ಕಾಲ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವೆಡೆಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದ್ದು, ಸೆಸ್ಕ್ನಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಎರಡು ದಿನಗಳಲ್ಲಿ ೧೧೨ ವಿದ್ಯುತ್ ಕಂಬಗಳು ಹಾನಿಗೀಡಾಗಿರುವುದಾಗಿ ಸೆಸ್ಕ್ ಇಇ ಅನಿತಾಬಾಯಿ ತಿಳಿಸಿದ್ದಾರೆ. ಶುಕ್ರವಾರದಂದು ಜಿಲ್ಲೆಯ ಶಾಲಾ - ಕಾಲೇಜುಗಳಿಗೂ ರಜೆ ಘೋಷಿಸಲ್ಪಟ್ಟಿತ್ತು.

ಆದರೆ ಶುಕ್ರವಾರ ಜಿಲ್ಲೆಯಲ್ಲಿ ಮಳೆ ತುಸು ಇಳಿಮುಖವಾಗಿದ್ದು, ಕಂಡು ಬಂದಿದೆಯಾದರೂ ಮಳೆಯ ಸನ್ನಿವೇಶ ಮುಂದುವರಿಯುತ್ತಿದೆ. ಏರಿಕೆಯಾಗಿದ್ದ ನೀರಿನ ಮಟ್ಟವೂ ತಾ. ೭ ರಂದು ಕಡಿಮೆಯಾಗಿತ್ತು. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆ ೮ ಗಂಟೆತನಕ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೩.೩೫ ಇಂಚು ಮಳೆ ಜಿಲ್ಲೆಯಲ್ಲಿ ಸುರಿದಿದೆ. ಅದರಲ್ಲೂ ಭಾಗಮಂಡಲ ಸೇರಿದಂತೆ ಮಡಿಕೇರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ೯.೧೦ ಇಂಚುಗಳಷ್ಟು ಭಾರೀ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೫.೬೦ ಇಂಚುಗಳಷ್ಟು ಸರಾಸರಿ ಮಳೆಯಾಗಿದ್ದು, ವೀರಾಜಪೇಟೆ ತಾಲೂಕಿನಲ್ಲಿ ೨.೨೩ ಹಾಗೂ ಸೋಮವಾರಪೇಟೆ ತಾಲೂಕಿನಲ್ಲೂ ೨.೦೬ ಇಂಚು ಸರಾಸರಿ ಮಳೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ.

ಗುರುವಾರದಂದು ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಹಲವೆಡೆ ಹಾನಿಗಳೂ ಸಂಭವಿಸಿವೆ. ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರದಂದು ಮಳೆಯ ರಭಸ ಒಂದಷ್ಟು ಕಡಿಮೆಯಾಗಿತ್ತು.

ಹೋಬಳಿವಾರು ವಿವರ

ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ತಾ. ೭ ರಂದು ಬೆಳಿಗ್ಗೆ ೮ ಗಂಟೆಯ ತನಕ ಕಳೆದ ೨೪ ಗಂಟೆಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಇಂತಿದೆ. ಮಡಿಕೇರಿ ಕಸಬಾದಲ್ಲಿ ೪.೩೨, ನಾಪೋಕ್ಲು ೩.೦೪, ಸಂಪಾಜೆ ೬, ವೀರಾಜಪೇಟೆ ಕಸಬಾ ೪.೭೩, ಹುದಿಕೇರಿ ೨, ಶ್ರೀಮಂಗಲ ೨.೬೦, ಪೊನ್ನಂಪೇಟೆ ೨.೨೦, ಅಮ್ಮತ್ತಿ ೨.೪೪ ಹಾಗೂ ಬಾಳೆಲೆ ಹೋಬಳಿಯಲ್ಲಿ ೦.೪೦ ಇಂಚು ಮಳೆಯಾಗಿದೆ.

ಸೋಮವಾರಪೇಟೆ ಕಸಬಾದಲ್ಲಿ ೧.೬೯ , ಶನಿವಾರಸಂತೆ ೧.೪೮, ಶಾಂತಳ್ಳಿ ೪.೨೪, ಕೊಡ್ಲಿಪೇಟೆ ೧.೪೪, ಕುಶಾಲನಗರ ೧.೨೮ ಹಾಗೂ ಸುಂಟಿಕೊಪ್ಪದಲ್ಲಿ ೨.೨೦ ಇಂಚು ಮಳೆಯಾಗಿದೆ.