ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮುಂಗಾರು ಚುರುಕುಗೊಂಡಿದ್ದು ೩ ದಿನಗಳಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಆಗಾಗ್ಗೆ ಬಿಡುವು ನೀಡುತ್ತಾ ರಭಸವಾಗಿ ಬೀಸುವ ಗಾಳಿಯೊಂದಿಗೆ ಸುರಿಯಿತು. ಮಧ್ಯಾಹ್ನದ ನಂತರ ಬಿರುಸು ಪಡೆಯಿತು. ರೈತರು ನಿಟ್ಟುಸಿರು ಚೆಲ್ಲಿ ಅಧಿಕ ಮಳೆಯ ನಿರೀಕ್ಷೆಯಿಂದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಿದ್ದಾರೆ.
ಮುಂಗಾರು ಮಳೆ ತಡವಾಗಿ ಆರಂಭವಾದರೂ ಆಗಾಗ್ಗೆ ಮಳೆಯ ಸಿಂಚನವಾಗುತ್ತಿದ್ದು ಭೂಮಿ ಹದಗೊಂಡು ಶೀತ ಹಿಡಿದಿದೆ. ಭತ್ತದ ಬೀಜ ಬಿತ್ತನೆಗಾಗಲೀ ನಾಟಿಗಾಗಲಿ ಮಳೆ ಸಾಕಾಗುತ್ತಿದೆ. ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲ್ಲಿ ಕೆಲವೆಡೆ ಗದ್ದೆಗಳಲ್ಲಿ ಭತ್ತದ ಸಸಿಮಡಿ ಬೆಳೆದು ನಿಂತಿದೆ. ನಾಟಿಯ ಸಿದ್ಧತೆಯೂ ನಡೆದಿದೆ. ಬಹುತೇಕ ರೈತರು ಇದೀಗ ಬೀಜ ಖರೀದಿಸಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.
ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಆಷಾಢ ಮಾಸದ ಗಾಳಿ ರಭಸವಾಗಿ ಬೀಸುತ್ತಿದ್ದು ಅಲ್ಲಲ್ಲಿ ಹಾನಿಯಾಗುತ್ತಿದೆ. ಹಳೆಯ ಮನೆಯ ಗೋಡೆಗಳು ಕುಸಿಯುತ್ತಿದ್ದು, ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು ಸೆಸ್ಕ್ ಸಿಬ್ಬಂದಿ ತಕ್ಷಣ ಸ್ಪಂದಿಸುತ್ತಾ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ೩ ತಿಂಗಳ ಅವಧಿಯ ಭತ್ತದ ಬೀಜ ಬಿತ್ತನೆಗಿದು ಸಕಾಲವಾಗಿದೆ. ೬ ತಿಂಗಳ ಅವಧಿಯ ಭತ್ತದ ಬೀಜದ ಸಸಿಮಡಿ ನಾಟಿಗೆ ಸಿದ್ಧವಾಗಿದ್ದು ರೈತರು ನಾಟಿ ಕೆಲಸಕ್ಕೆ ಉತ್ಸಾಹ ತೋರುತ್ತಿದ್ದಾರೆ ಎಂದು ರೈತ ಕಾಜೂರು ಚಂದ್ರಣ್ಣ ಹೇಳಿದರು.
ಶನಿವಾರಸಂತೆ ಪಟ್ಟಣದ ಮುಖ್ಯರಸ್ತೆಯಿಂದ ಕಾವೇರಿ ವಿದ್ಯಾಸಂಸ್ಥೆಗೆ ತೆರಳುವ ರಸ್ತೆ ಬದಿಯ ದಿವಂಗತ ಚೆಲುವ ಶೆಟ್ಟಿಯವರ ಹಳೆಯ ಹಂಚಿನ ಮನೆಯ ಗೋಡೆ ಗುರುವಾರದ ಮಳೆಗೆ ಕುಸಿದು ಬಿದ್ದಿದೆ. ವಿದ್ಯಾಸಂಸ್ಥೆ ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ನಿತ್ಯ ತಿರುಗಾಡುತ್ತಿದ್ದು ಆ ಸಮಯದಲ್ಲಿ ಗೋಡೆ ಕುಸಿದಿದ್ದರೇ ಅಪಾಯ ಸಂಭವಿಸುತ್ತಿತ್ತು.
ಮಳೆಯಿAದ ಕಸಕಡ್ಡಿ ತುಂಬಿರುವ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮುಂಭಾಗದ ಚರಂಡಿಯಲ್ಲಿ ತ್ಯಾಜ್ಯ ವಸ್ತು ತುಂಬಿದ್ದು ಸುರಿಯುತ್ತಿರುವ ಮಳೆಗೆ ಕೊಳಚೆ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಗ್ರಾಮ ನೈರ್ಮಲ್ಯದ ಕಡೆ ಗಮನ ಹರಿಸದ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೀರಾಜಪೇಟೆ : ಮುಂಗಾರು ಮಳೆ ವಿಳಂಬವಾಗಿ ಆಗಮಿಸಿದರೂ ಇದೀಗ ಚುರುಕುಗೊಂಡು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಹಳ್ಳ, ತೋಡು, ತೊರೆ, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಈವರೆಗೆ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಆದರೂ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಭತ್ತ, ಕಾಫಿ, ಏಲಕ್ಕಿ, ಕಾಳುಮೆಣಸು, ಅಡಿಕೆ ಕೃಷಿಗೆ ಪೂರಕವಾಗಿದೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಇದೇ ರೀತಿ ಮಳೆ ಮುಂದುವರೆದರೆ ಸುತ್ತಮುತ್ತ ಗ್ರಾಮಗಳ ತೋಟ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ವೀರಾಜಪೇಟೆ, ಆರ್ಜಿ, ಬೇಟೋಳಿ, ಹೆಗ್ಗಳ, ತೋರ ಬೂದಿಮಾಳದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ಅರಮೆರಿ, ಕದನೂರು, ಮೈತಾಡಿ ಸುತ್ತಮುತ್ತ ಗದ್ದಗೆ ನೀರು ನುಗ್ಗಿದೆ. ವೀರಾಜಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಬೇತ್ರಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪುವ ಸ್ಥಿತಿ ಬಂದಿದೆ. ಸೇತುವೆಯ ಸುತ್ತಮುತ್ತ ಬಿದಿರು ಗಿಡಗಂಟಿಗಳು ಬೆಳೆದುಕೊಂಡಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸೇತುವೆ ಕುಸಿಯುವ ಹಂತ ತಲುಪುವ ಸಾಧ್ಯತೆ ಇದೆ.
ನಿರ್ವಹಣೆ ಇಲ್ಲದ ಚರಂಡಿ : ತಾಲೂಕಿನ ಬಹುತೇಕ ಭಾಗದ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾಜ್ಯ ಹೆದ್ದಾರಿಗಳು ಸೇರಿದಂತೆ ಜಿಲ್ಲಾ, ಪಂಚಾಯಿತಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗಳು ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೆದ್ದಾರಿಗಳ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯ ಬದಿಯಲ್ಲಿ ನೀರು ಹರಿದು ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ. ರಸ್ತೆ ಬದಿಯಲ್ಲಿ ಮನೆ ಹಾಗೂ ಕಟ್ಟಡ ನಿರ್ಮಾಣ ಮಾಡಿಕೊಂಡಿರುವ ಮನೆ ಹಾಗೂ ಕಟ್ಟಡ ಮಾಲೀಕರು ತಮ್ಮ ಮನೆ ಹಾಗೂ ಕಟ್ಟಡಗಳಿಗೆ ತೆರಳಲು ಚರಂಡಿಯನ್ನು ಮುಚ್ಚಿ ಸರಾಗ ರಸ್ತೆ ಮಾಡಿಕೊಂಡಿದ್ದಾರೆ. ಚರಂಡಿ ವ್ಯವಸ್ಥೆ ಸರಿಇಲ್ಲದ ಕಾರಣ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.
ಇಲಾಖೆ ನಿರ್ಲಕ್ಷö್ಯ: ತಮ್ಮ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸಂಬAಧಿಸಿದ ಇಲಾಖೆಗಳಿಂದ ಪರವಾನಿಗೆ ಪಡೆದುಕೊಳ್ಳುವಾಗ ಸಾರ್ವಜನಿಕರಿಗೆ ಮತ್ತು ಸರ್ಕಾರದ ಆಸ್ತಿಪಾಸ್ತಿ ನಷ್ಟ ಆಗದ ರೀತಿಯಲ್ಲಿ ಮನೆ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳುವ ನಿಬಂಧನೆಗಳಿದ್ದರೂ ಅಂತಹ ಆದೇಶಗಳನ್ನು ಗಾಳಿಗೆ ತೂರಲಾಗಿದೆ. ಇಲಾಖೆ ಅಂತವರ ವಿರುದ್ಧ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಒಂದು ವೇಳೆ ಅಂತಹವರ ವಿರುದ್ದ ಕ್ರಮ ಜರುಗಿಸಲು ತೆರಳಿದರೆ ರಾಜಕೀಯ ಒತ್ತಡ ತಂದು ಅಲ್ಲಿಗೆ ಕೊನೆಗಾಣಿಸುತ್ತಾರೆ. ಸರ್ಕಾರ ಕೊರೊನಾ ಮತ್ತು ಪ್ರಕೃತಿ ವಿಕೋಪ ಆದ ಮೇಲೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ನೆರವು ನೀಡುತ್ತಿಲ್ಲ. ಅಭಿವೃದ್ಧಿಗಾಗಿ ಬಂದ ಹಣವನ್ನು ಅಧಿಕಾರಿಗಳು ಸಮರ್ಪಕವಾಗಿ ಖರ್ಚು ಮಾಡದೆ ಜಿಲ್ಲಾ ಖಜಾನೆಯಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಮಳೆಗಾಲ ಪ್ರಾರಂಭವಾಗುವ ಮುನ್ನ ನಿದ್ರಾವಸ್ಥೆಯಲ್ಲಿದ್ದು ಆಗಸ್ಟ್, ಸೆಪ್ಟಂಬರ್ನಲ್ಲಿ ಮಳೆಗಾಲದ ಕೊನೆಯ ಹಂತದಲ್ಲಿ ಚರಂಡಿ ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗುತ್ತದೆ. ಅಡ್ಡ ರಸ್ತೆಗಳು, ಮನೆ, ಕಟ್ಟಡಗಳು ನಿರ್ಮಾಣ ಮಾಡಿರುವ ಸ್ಥಳಗಳಲ್ಲಿ ಚರಂಡಿ ಶುಚಿಗೊಳಿಸಲು ಮುಂದಾಗುವುದಿಲ್ಲ. ಕೆಲವು ಕಡೆಗಳಲ್ಲಿ ತೋಟ ಮಾಲೀಕರು ರಸ್ತೆ ಬದಿಯಲ್ಲಿಯೇ ಬೇಲಿ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ರಸ್ತೆ ಒತ್ತಿನಲ್ಲಿ ಹಾಕಿರುವುದರಿಂದ ಚರಂಡಿ ನಿರ್ಮಾಣ ಮಾಡಲು ಅವಕಾಶ ಇರುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚರಂಡಿ ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗೋಣಿಕೊಪ್ಪಲು : ದ.ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಬಿಡುವಿಲ್ಲದಂತೆ ಸುರಿಯುತ್ತಿದ್ದ ಮಳೆಯು ಶುಕ್ರವಾರದಂದು ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಮುಂಜಾನೆಯಿAದ ಸಂಜೆಯವರೆಗೂ ಮೋಡ ಮುಸುಕಿದ ವಾತಾವರಣ ಕಂಡುಬAದಿದ್ದು ಮಧ್ಯಾಹ್ನದ ವೇಳೆ ಬಿಸಿಲು ಕಾಣಿಸಿಕೊಂಡಿತು.
ತಾ.೬ ರ ಸಂಜೆಯ ವೇಳೆಯಲ್ಲಿ ಸುರಿದ ಮಳೆ, ಗಾಳಿಯಿಂದ ಪೊನ್ನಂಪೇಟೆ ಹೋಬಳಿಯ ಹುದೂರು ಗ್ರಾಮದ ಬೋಜಿ ಬಿದ್ದಪ್ಪ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಮನೆಯ ಒಂದು ಭಾಗವು ಹಾನಿಯಾಗಿದೆ. ಈಚೂರು ಗ್ರಾಮದ ತೀತಮಾಡ ದೇವಯ್ಯ ಎಂಬವರಿಗೆ ಸೇರಿದ ತಡೆಗೋಡೆಯು ಸುರಿದ ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ರೆವಿನ್ಯೂ ಅಧಿಕಾರಿ ಸುಧೀಂದ್ರ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು.
ಮಳೆ ಬಿಡುವು ನೀಡಿದ್ದರಿಂದ ಕೀರೆಹೊಳೆ ಸೇರಿದಂತೆ ಸುತ್ತಮುತ್ತಲಿನ ಹೊಳೆಗಳಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಕಡಿಮೆಯಾಗಿದೆ. ಮಳೆಯಿಂದ ಗ್ರಾಮೀಣ ಭಾಗದ ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಇವುಗಳನ್ನು ದುರಸ್ತಿ ಮಾಡುವ ಕೆಲಸದಲ್ಲಿ ಚೆಸ್ಕಾಂ ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೋಣಿಕೊಪ್ಪ ನಗರ ಹಾಗೂ ಪೊನ್ನಂಪೇಟೆ ನಗರದಲ್ಲಿ ಹೆಚ್ಚಾಗಿ ಜನಸಂಚಾರ ಕಂಡುಬರಲಿಲ್ಲ. ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಬಿರುನಾಣಿ ಭಾಗದ ಮುಖ್ಯ ರಸ್ತೆಯಲ್ಲಿ ಭಾರಿ ಗಾತ್ರದ ಮರವೊಂದು ಮಗುಚಿಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳಿಗೆ ಹಾನಿ ಆಗಿವೆ. ಈ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ವಿಳಂಬವಾಗಿದೆ. ಸ್ಥಳಕ್ಕೆ ಚೆಸ್ಕಾಂ ಎಇಇ ನೀಲ್ಶೆಟ್ಟಿ ಹಾಗೂ ಇಂಜಿನಿಯರ್ಗಳು ಭೇಟಿ ನೀಡಿ ಸುರಿಯುತ್ತಿದ್ದ ಮಳೆಯ ನಡುವೆ ಮರ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ನೇತೃತ್ವದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ನೋಡೆಲ್ ಅಧಿಕಾರಿ ಶಿವಮೂರ್ತಿ ಹಾಗೂ ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಾಕರ್ ಭೇಟಿ ನೀಡಿ ಪರಿಶೀಲಿಸಿ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಿದರು.
ಈ ಕುರಿತು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮಾಹಿತಿ ನೀಡಿ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನಮಟ್ಟ ಏರಿಕೆಯಾದಲ್ಲಿ ನದಿ ತೀರದ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯ ಪಡೆಯಲು ಸಿದ್ದಾಪುರದಲ್ಲಿ ಪರಿಹಾರ ಕೇಂದ್ರವನ್ನು ಗುರುತಿಸಲಾಗಿದ್ದು ತಾಲೂಕು ಆಡಳಿತವು ಎಲ್ಲಾ ರೀತಿಯಲ್ಲಿ ಸಿದ್ಧತೆ ಕೈಗೊಂಡಿದೆ. ನದಿ ತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಾಲ್ದಾರೆ ಗ್ರಾಮದ ೧೦ ಎಕರೆ ೬೦ ಸೆಂಟ್ ಜಾಗ ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಸೂರು ಕಲ್ಪಿಸುವ ಯೋಜನೆ ರೂಪಿಸಲಾಗುವುದೆಂದರು. ಈಗಾಗಲೇ ಪ್ರವಾಹ ಸಂಬAಧ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಲಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೂಡಿಗೆ : ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿ ಅಂಚಿನ ಮೇಲ್ಭಾಗದ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವುದರಿಂದಾಗಿ ಕಾವೇರಿ ನದಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಕಾವೇರಿ ಮತ್ತು ಹಾರಂಗಿ ನದಿಗಳು ಕೂಡಿಗೆ ಹತ್ತಿರ ಸಂಗಮವಾಗಿ ಮುಂದೆ ಹರಿದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಮುಂಭಾಗದಲ್ಲಿ ನೀರು ಕೋಡಿ ಹರಿಯುತ್ತಿದೆ.
ಕಳೆÀದ ವಾರದಲ್ಲಿ ತೀರ ಕೆಳಮಟ್ಟದಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ಹಾರಂಗಿ ಮತ್ತು ಕಾವೇರಿ ನದಿ ಸಂಗಮದ ಬಳಿಯ ಕಣಿವೆಯಲ್ಲಿ ನದಿ ನೀರಿನ ಮಟ್ಟ ೧೦ ಅಡಿಗಳಷ್ಟು ಏರಿಕೆಯಾಗಿದೆ.
ಮಡಿಕೇರಿ : ನಗರದ ಕೈಗಾರಿಕ ಬಡಾವಣೆಯ ಪ್ರೆಸ್ಕ್ಲಬ್ ಎದುರಿನ ಚರಂಡಿಯು ತ್ಯಾಜ್ಯಗಳಿಂದ ತುಂಬಿ ನೀರಿನ ಸರಾಗ ಹರಿವಿಗೆ ತೊಂದರೆಯಾಗಿತ್ತು. ವಾರ್ಡ್ನ ಸದಸ್ಯ ರಾಜೇಶ್ ಯಲ್ಲಪ್ಪ ಅವರಿಗೆ ಮಾಹಿತಿ ನೀಡಿದ ಮೇರೆಗೆ, ನಗರಸಭಾ ಪೌರಕಾರ್ಮಿಕರನ್ನು ಕರೆಸಿ ಚರಂಡಿ ಸ್ವಚ್ಛ ಗೊಳಿಸಲಾಯಿತು.
ಮಡಿಕೇರಿ : ನಗರದ ಕೈಗಾರಿಕ ಬಡಾವಣೆಯ ಪ್ರೆಸ್ಕ್ಲಬ್ ಎದುರಿನ ಚರಂಡಿಯು ತ್ಯಾಜ್ಯಗಳಿಂದ ತುಂಬಿ ನೀರಿನ ಸರಾಗ ಹರಿವಿಗೆ ತೊಂದರೆಯಾಗಿತ್ತು. ವಾರ್ಡ್ನ ಸದಸ್ಯ ರಾಜೇಶ್ ಯಲ್ಲಪ್ಪ ಅವರಿಗೆ ಮಾಹಿತಿ ನೀಡಿದ ಮೇರೆಗೆ, ನಗರಸಭಾ ಪೌರಕಾರ್ಮಿಕರನ್ನು ಕರೆಸಿ ಚರಂಡಿ ಸ್ವಚ್ಛ ಗೊಳಿಸಲಾಯಿತು.
ಸುರಕ್ಷಿತ ಸ್ಥಳಕ್ಕೆ ತೆರಳಲು ನೋಟೀಸ್
ಚೆಟ್ಟಳ್ಳಿ: ಕುಶಾಲನಗರವ್ಯಾಪ್ತಿಗೆ ಒಳಪಡುವ ನದಿ ಪಾತ್ರ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರವಾಹ ಹಾಗೂ ಭೂಕುಸಿತ ಸಾಧ್ಯತೆ ಇರುವುದರಿಂದ ಮಂಜಾಗ್ರತಾ ಕ್ರಮವಾಗಿ ಸ್ವಯಂಪ್ರೇರಿತವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕುಶಾಲನಗರ ತಹಶೀಲ್ದಾರ್ ನೋಟೀಸ್ ನೀಡಿದ್ದಾರೆ.
ಸರಕಾರದ ಮಾರ್ಗದರ್ಶನ ಹಾಗೂ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಡಳಿತ ಮತ್ತು ಪಂಚಾಯಿತಿ ಅಧಿಕಾರಿಗಳು ಕಾಲಕಾಲಕ್ಕೆ ನೀಡುವ ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಭೂಕುಸಿತ ಹಾಗೂ ನದಿಪಾತ್ರದ ಮುಳುಗಡೆ ಪ್ರದೇಶದ ಮನೆಗಳಲ್ಲಿ ವಾಸವಿರುವವರು ಮನೆ, ಅಂಗಡಿಗಳಲ್ಲಿ ಇರುವ ಸಾಮಗ್ರಿಗಳೊಂದಿಗೆ ಮುಂಜಾಗ್ರತಾ ದೃಷ್ಟಿಯಿಂದ ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಗೊAಡು ಸಂಭವಿಸಬಹುದಾದ ನಷ್ಟ ಹಾಗೂ ಪ್ರಾಣಹಾನಿ ತಪ್ಪಿಸಲು ತಿಳಿಸಲಾಗಿದ್ದು, ಬೇರೆಡೆಗೆ ತೆರಳಬೇಕು. ಸಾಧ್ಯವಾಗದಿದ್ದರೆ ಪಂಚಾಯಿತಿ ವತಿಯಿಂದ ಗುರುತಿಸಿರುವ ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದುಕೊಳ್ಳಲು ತಹಶೀಲ್ದಾರ್ ನೋಟೀಸಿನಲ್ಲಿ ತಿಳಿಸಿದ್ದಾರೆ.
ನೋಟೀಸ್ ತಿರಸ್ಕಾರ
ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅಪಾಯದ ಅಂಚಿನಲ್ಲಿರುವ ಪೊನ್ನತ್ಮೊಟ್ಟೆಯ ೭ ಮನೆಗಳಿಗೆ, ಬಕ್ಕ ಬೇರಂಗಿಬೆಟ್ಟದ ೨ ಮನೆಗಳಿಗೆ ಹಾಗೂ ಜೇನುಕೊಲ್ಲಿ ಬೆಟ್ಟದ ೨ ಮನೆಗಳಿಗೆ ನೋಟಿಸ್ ನೀಡಲಾಗಿದ್ದು, ಪೊನ್ನತ್ಮೊಟ್ಟೆಯ ೨ ಮನೆಯ ಗೋಡೆಗೆ ಸಿಬ್ಬಂದಿಗಳು ನೋಟೀಸ್ ಅಂಟಿಸಿದರೆ ಮತ್ತೆ ಎರಡು ಮನೆಯ ಮಾಲೀಕರು ನೋಟೀಸ್ ಪಡೆಯದೇ ತಿರಸ್ಕರಿಸಿದ್ದಾರೆ. ನಾಪೋಕ್ಲು: ಮುಂಗಾರು ಮಳೆ ಹೋಬಳಿಯಾದ್ಯಂತ ಬಿರುಸಿನಿಂದ ಸುರಿಯುತ್ತಿದೆ, ತಡವಾಗಿ ಆರಂಭವಾದರೂ ಈಗ ನಿರಂತರವಾಗಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಸಮೀಪದ ಕೊಳಕೇರಿ ಗ್ರಾಮದ ಕೋಟೇರಿ ಮತ್ತು ಹೊದ್ದೂರು ಗ್ರಾಮ ಪಂಚಾಯಿತಿ ಕುಯ್ಯಂಗೇರಿಯ ರೈತರು ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಚೆಯ್ಯಂಡಾಣೆ: ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಚಾಮಿಯಾಲ ದೇವಣಗೇರಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಸೇತುವೆ ವರ್ಷಧಾರೆಗೆ ತುಂಬಿ ಹರಿಯುತ್ತಿದೆ. ಸ್ಥಳೀಯರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.ಮಡಿಕೇರಿ: ಮಳೆಯ ಅರ್ಭಟಕ್ಕೆ ಮಡಿಕೇರಿ ನಗರದ ಅಲ್ಲಲ್ಲಿ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿವೆ.
ಕಳೆದ ರಾತ್ರಿ ರಾಣಿಪೇಟೆಯ ಸಲಾಲುದ್ದೀನ್ ಎಂಬವರಿಗೆ ಸೇರಿದ ಮನೆ ಮೇಲೆ ಹಿಂಬದಿಯ ಬರೆ ಕುಸಿದು ಮನೆಯ ತಡೆಗೋಡೆಗೆ ಹಾನಿಯಾಗಿದೆ. ಮನೆಯ ಹಿಂಬದಿಯ ಬಾಗಿಲು ತೆಗೆದ ಸಂದರ್ಭ ಮನೆಯೊಳಗೆ ಮಣ್ಣು, ಕಲ್ಲು ನುಗ್ಗಿ ಬಂದಿದೆ. ಇದರಿಂದ ಕಟ್ಟಡ ಹಾಗೂ ಗೃಹಪಯೋಗಿ ವಸ್ತುಗಳು ಹಾಳಾಗಿವೆ.
ರೇಸ್ಕೋರ್ಸ್ ರಸ್ತೆಯ ಮುಕ್ಕಾಟೀರ ಮಧು ಎಂಬವರಿಗೆ ಸೇರಿದ ತಡೆಗೋಡೆ, ಮಹದೇವಪೇಟೆಯ ಮನೆಯೊಂದು ಕುಸಿದು ನಷ್ಟ ಸಂಭವಿಸಿದೆ. ಎನ್.ಡಿ.ಆರ್.ಎಫ್. ತಂಡದ ಮೂಲಕ ಕಾರ್ಯಾಚರಣೆ ನಡೆಸಿ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಪ್ರವಾಹ ಸಂಭವಿಸುವ ಸ್ಥಳಗಳಾದ ಕಾವೇರಿ ಲೇಔಟ್, ಮುಳಿಯ ಬಡಾವಣೆ ಸೇರಿದಂತೆ ಇನ್ನಿತರ ಕಡೆಗಳಿಗೆ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ ಸೇರಿದಂತೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ : ಬೆಟ್ಟಗೇರಿ ಗ್ರಾಮ ಪಂಚಾಯಿತಿ ಹೆರವನಾಡು ಗ್ರಾಮದ ಪನ್ಯ ಕಡ್ಯದ ಕೆ.ಎಸ್. ಅಶೋಕ್ ಎಂಬವರಿಗೆ ಸೇರಿದ ಮನೆಯು ಭಾರೀ ಮಳೆಗೆ ಭಾಗಶಃ ಕುಸಿದು ಬಿದ್ದಿದೆ. ಗ್ರಾ.ಪಂ. ಸದಸ್ಯ ಬಿ.ಕೆ. ಗೋಪಾಲ ಪೂಜಾರಿ ಉಡೋತ್, ಜಲಜಾಕ್ಷಿ, ಅಭಿವೃದ್ಧಿ ಅಧಿಕಾರಿ ಕೆ. ಉದಯ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ೩ಏಳನೇ ಪುಟಕ್ಕೆ
(ಆರನೇ ಪುಟದಿಂದ) ಮಡಿಕೇರಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ. ಹಾನಿ ಪ್ರದೇಶಗಳಿಗೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಯ ಗೋಡೆಗೆ ತಡೆಗೋಡೆ ಕುಸಿದ ರಾಣಿಪೇಟೆ, ಜಲಾವೃತಗೊಂಡು ಹಾನಿಗೊಳಗಾದ ಪ್ರದೇಶ ಹಾಗೂ ರಸ್ತೆಗಳನ್ನು ಪರಿಶೀಲಿಸಿದರು. ತೋಡು ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಲಾಗುವುದು ಎಂದು ತಿಳಿಸಿದರು.
ಬೆಟ್ಟಗುಡ್ಡ ಮತ್ತು ತಗ್ಗುಪ್ರದೇಶದ ನಿವಾಸಿಗಳು ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಎನ್ಡಿಆರ್ಎಫ್ ತಂಡದ ಸಹಕಾರ ಪಡೆದರು.
ವಿವಿಧ ವಾರ್ಡ್ಗಳ ಭೇಟಿ ಸಂದರ್ಭ ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು. ಪೊನ್ನಂಪೇಟೆ: ಕಳೆದ ಎರಡು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚೂರು ಕುಂದಾ ಗ್ರಾಮದ ತೀತಮಾಡ ಎನ್. ಶಾರದಾ ದೇವಯ್ಯ ಎಂಬುವವರ ಮನೆಯ ಹಿಂಭಾಗದ ತಡೆಗೋಡೆ ಕುಸಿದು ಬಿದ್ದಿದೆ.
ತಡೆಗೋಡೆ ಬಿದ್ದ ರಭಸಕ್ಕೆ ಮನೆಯ ಹಿಂಭಾಗದ ಗೋಡೆಯೂ ಕುಸಿದು ಬಿದ್ದಿದ್ದು, ಶೌಚಾಲಯ, ಅಡುಗೆ ಮನೆ, ಗ್ಯಾಸ್ ಸಿಲಿಂಡರ್ ಇನ್ನಿತರ ವಸ್ತುಗಳು ಹಾನಿಗೊಳಗಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಮಹೇಶ್, ಆರ್ಐ ಸುದೀಂದ್ರ, ಗ್ರಾಮ ಸಹಾಯಕ ರಾಜೇಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಈಚೂರು ಗ್ರಾಮದ ಸಂಚಾಲಕ ತೀತಮಾಡ ಶರಣು, ಇನ್ನಿತರರು ಇದ್ದರು.
ಸುಂಟಿಕೊಪ್ಪ : ಇಲ್ಲಿನ ಉಲುಗುಲಿ ರಸ್ತೆಯ ನಿವಾಸಿ ಪತ್ರಿಕಾ ವಿತರಕರಾದ ಎಂ.ಎ. ವಸಂತ ಅವರ ಮನೆಯ ಮುಂಭಾಗದ ಗೋಡೆ ತಾ. ೬ ರಾತ್ರಿ ಸುರಿದ ಮಳೆಗೆ ಬಿದ್ದು ನೆಲಸಮವಾಗಿ ನಷ್ಟ ಸಂಭವಿಸಿದೆ. ಈ ಬಗ್ಗೆ ಎಂ.ಎ. ವಸಂತ ಅವರು ಗ್ರಾಮ ಪಂಚಾಯಿತಿಗೆ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ತಡೆಗೋಡೆ ಬಿದ್ದು ಹಾನಿಯಾಗಿರುವ ಬಗ್ಗೆ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದರು.