ವೀರಾಜಪೇಟೆ, ಜು. ೭: ವೀರಾಜಪೇಟೆ ಪುರಸಭೆಯ ತ್ಯಾಜ್ಯಗಳನ್ನು ಸಮೀಪದ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿಯ ಸರ್ವೆ ನಂ.೩೧೫/೪ರಲ್ಲಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ಕಸವನ್ನು ಬೀದಿ ನಾಯಿಗಳು ಎಳೆದಾಡುವುದರೊಂದಿಗೆ ನೊಣ ಮತ್ತು ಸೊಳ್ಳೆಗಳು ಹೆಚ್ಚಾಗಿದ್ದು, ಅಕ್ಕಪಕ್ಕದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರ್ಜಿ ಗ್ರಾಮಸ್ಥರು ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಆರ್ಜಿ ಗ್ರಾಮಸ್ಥರಾದ ಬಿ.ಆರ್. ಅನಿಲ್ ಕುಮಾರ್ ಮಾತನಾಡಿ, ಕಸ ವಿಲೇವಾರಿ ಇತ್ತೀಚಿನ ವರ್ಷಗಳಲ್ಲಿ ಹಸಿ ಮೀನು ಹಾಗೂ ಕೋಳಿ ತ್ಯಾಜ್ಯಗಳನ್ನು ತಂದು ಸುರಿಯುಲಾಗುತ್ತಿದೆ. ಇದನ್ನು ಬೀದಿ ನಾಯಿಗಳು ಎಲ್ಲೆಂದರಲ್ಲಿ ಎಳೆದು ಹಾಕುತ್ತವೆ. ಇಲ್ಲಿನ ಕುಡಿಯುವ ನೀರು ತೆರೆದ ಬಾವಿಗಳಲ್ಲಿ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭಯ ಉಂಟಾಗಿದೆ. ಅದೇ ರಸ್ತೆ ಪಕ್ಕದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡ ಇದ್ದು ಇಲ್ಲಿನ ಮಕ್ಕಳು ಭಯದಿಂದ ಜೀವನ ಸಾಗಿಸುವಂತಾಗಿದೆ ಎಂದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ ತ್ಯಾಜ್ಯ ವಿಲೇವಾರಿ ಯೋಜನೆಯ ವರದಿ ತಯಾರಾಗಿದ್ದು ಇದಕ್ಕೆ ಒಂದು ತಂಡ ರಚಿಸಲಾಗಿದೆ. ಹಸಿ ಕಸ ಮತ್ತು ಒಣಕಸ ಹಾಗೂ ಪ್ಲಾಸ್ಟಿಕ್ಗಳನ್ನು ವಿಂಗಡಣೆ ಮಾಡಿ ಹಸಿ ಕಸವನ್ನು ಗೊಬ್ಬರ ಮಾಡಲಾಗುವುದು. ನಗರದ ಸಾರ್ವಜನಿಕರು ಕಸ ಹಾಕುವ ಬಗ್ಗೆ ತಿಳಿದುಕೊಂಡು ಸಹಕಾರ ನೀಡಬೇಕು ಎಂದರು.
ಮನವಿ ಸಲ್ಲಿಸುವ ಸಂದರ್ಭ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಪೇಂದ್ರ, ಗ್ರಾಮಸ್ಥರಾದ ಕೆ.ಸಿ. ಜನಾರ್ಧನ, ಬಿ.ಜಿ. ನಾಗೇಶ್, ಹೆಚ್.ಎ. ಸುರೇಶ್, ಜಿ.ಕೆ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.