ಮಡಿಕೇರಿ ಜು. ೬: ಉತ್ತಮ ವ್ಯಕ್ತಿತ್ವದ ಜೊತೆಯಾಗಿದ್ದರೆ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ ಅಭಿಪ್ರಾಯಪಟ್ಟರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ಆಯೋಜಿಸಿದ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕಲೆ ಎಂಬ ವಿಷಯದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಾನು ನನ್ನವರು, ನನ್ನತನದಿಂದ ಮುಕ್ತವಾಗಿ ಸಮಾಜಮುಖಿ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಾಗಿದೆ.

ಇತಿಹಾಸದಲ್ಲಿ ಸ್ಥಾನ ಪಡೆಯಬೇಕಾದರೆ ಸಮಾಜಮುಖಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ಐಕ್ಯೂಎಸ್‌ಸಿ ಸಂಯೋಜಕರಾದ ಡಾ. ರಾಜೇಂದ್ರ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕಾಗಿ ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ. ಜಾಗತಿಕವಾಗಿ ಸ್ಫರ್ಧಾತ್ಮಕ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾಗಲು ಸಂವಹನ ಕಲೆ ತುಂಬಾ ಮುಖ್ಯ ಎಂದು ತಿಳಿಸಿದರು. ಮಂಗಳೂರಿನ ಸಂಜೆ ಕಾಲೇಜಿನ ಅಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನದ ತರಬೇತುದಾರರಾದ ಡಾ.ಸ್ಟೀವನ್ ಡಿಸೋಜ, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕಲೆಯ ಬಗ್ಗೆ ತಿಳಿಸಿಕೊಟ್ಟರು. ಸ್ನಾತಕ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸಂಯೋಜಕರಾದ ಪವಿತ್ರ, ಕುಮಾರಿ, ಅಮೃತ, ಗುಣಶ್ರೀ ಕಾರ್ಯಕ್ರಮದಲ್ಲಿ ಹಾಜರಿದ್ದರು.