ವೀರಾಜಪೇಟೆ, ಜು. ೭: ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಮಳೆಗಾಲದ ತುರ್ತು ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುತ್ತದೆ ಎಂದು ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾಹಿತಿ ನೀಡಿದರು.
ನಗರ ಕಾಂಗ್ರೆಸ್ ಸಮಿತಿ ವೀರಾಜಪೇಟೆ ಘಟಕದ ವತಿಯಿಂದ ಶಾಸಕರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾದಂಡ ತಿಮ್ಮಯ್ಯ ಅವರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಜನ್ಮ ದಿನಾಚರಣೆಯಂದು ಸಾಮಾಜಿಕ ತಳಹದಿಯ ಮೇಲೆ ಕಾರ್ಯಕ್ರಮ ರೂಪಿಸಬೇಕು ಎಂಬ ಮನೋಭಾವದಿಂದ ತಾ. ೯ ರಂದು (ನಾಳೆ) ಪುರಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಮಳೆಗಾಲದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆ ಮಾಡಲು ಸಿದ್ಧಗೊಂಡ ನಿರ್ವಹಣಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡುವುದರೊಂದಿಗೆ ಘಟಕದ ಲೋಗೋ ಬಿಡುಗಡೆಗೊಳಿಸಿ ಹೆಲ್ಪ್ಲೈನ್ ಸಂಖ್ಯೆ ನೀಡಲಾಗುತ್ತದೆ. ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತದೆ. ಅದಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಸಿದ್ಧಗೊಳಿಸಲಾಗುತ್ತಿದ್ದು ತಾ.೯ರಂದು ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದರು.
ಪುರಸಭೆ ಸದಸ್ಯ ಡಿ.ಪಿ.ರಾಜೇಶ್ ಪದ್ಮನಾಭ ಮಾತನಾಡಿ, ರಕ್ತದಾನ ಶಿಬಿರ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೦೧.೩೦ ರ ವರೆಗೆ ನಡೆಯಲಿದೆ. ಸಾರ್ವಜನಿಕರಿಗೆ ಸ್ಪಂದನ ದೊರಕುವ ರೀತಿಯಲ್ಲಿ ತುರ್ತು ನಿರ್ವಹಣಾ ಘಟಕದ ಮೂಲಕ ಕೆಲಸ ನಿರ್ವಹಿಸಲು ಕಾರ್ಯಪಡೆ ಸಿದ್ದಗೊಳಿಸಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯ ಮಹಮದ್ ರಾಫಿ ಮಾತನಾಡಿ, ಮಳೆಗಾಲದ ತುರ್ತುಸ್ಥಿತಿ ನಿರ್ವಹಣೆಯು ಸರ್ವರ ಜವಾಬ್ದಾರಿಯಾಗಿದ್ದು, ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ಸಿದ್ಧಗೊಳಿಸಲಾಗಿದ್ದು, ನಗರ ಮತ್ತು ಇತರ ಸ್ಥಳಗಳಲ್ಲಿ ಮಳೆಯಿಂದ ಅನಾಹುತಗಳು ಸಂಭವಿಸಿದಲ್ಲಿ ಸಂಪರ್ಕಿಸಬಹುದು. ಶಾಸಕರ ಕಛೇರಿಯಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಸಹಾಯವಾಣಿಯನ್ನು ಕೆಲವೇ ದಿನಗಳಲ್ಲಿ ನಾಡಿನ ಜನತೆಗೆ ತಿಳಿಯಪಡಿಸಲಾಗುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ಈಗಾಗಲೇ ಪ್ರಚಾರಪಡಿಸಲಾಗುತ್ತಿದೆ. ಇದು ರಾಜಕೀಯ ರಹಿತವಾಗಿದ್ದು, ಜನಹಿತಕ್ಕಾಗಿ ಕಾರ್ಯಪಡೆ ಸಿದ್ದಗೊಳಿಸಲಾಗುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಹೆಚ್.ಎಸ್. ಮತೀನ್, ನಗರ ಕಾಂಗ್ರೆಸ್ ಕಾರ್ಯದರ್ಶಿ ಶಶಿಧರನ್, ನಗರ ಸಂಘಟನಾ ಕಾರ್ಯದರ್ಶಿ ಶಾನ್, ಉಪಾಧ್ಯಕ್ಷ ಹಮೀದ್, ಮತ್ತಿತರರು ಹಾಜರಿದ್ದರು.