ವೀರಾಜಪೇಟೆ, ಜು. ೭: ವಿವೇಕ ಜಾಗೃತ ಬಳಗ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿತಿಮತಿ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಸದ್ಗತಿ ದಿನದ ಪ್ರಯುಕ್ತ ವೀರಾಜಪೇಟೆ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಚಿತ ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಯಿತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೇತ್ರ ತಜ್ಞ ಡಾ. ವಿಕ್ರಂ ಮತ್ತು ತಂಡ ವೀರಾಜಪೇಟೆ, ತಾಲೂಕು ಆಸ್ಪತ್ರೆ ವೀರಾಜಪೇಟೆ ಇಲ್ಲಿನ ವೈದ್ಯರುಗಳಾದ ಡಾ. ಸೌಮ್ಯಶ್ರಿ ಮತ್ತು ಡಾ. ಸತ್ಯಜಿತ್ ರಾಜ್ ತಪಾಸಣೆ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಾಣಿ ವಹಿಸಿಕೊಂಡಿದ್ದು ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿವೇಕ ಜಾಗೃತ ಬಳಗದ ಅಧ್ಯಕ್ಷ ಶಶಿಕಲಾ ಭಾಸ್ಕರ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಹೆಚ್.ಆರ್. ಷಡಕ್ಷರಿ ಹಾಗೂ ಸರ್ವೋದಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಸೂರ್ಯ ಕುಮಾರಿ, ಮುಖ್ಯ ಗ್ರಂಥಪಾಲಕ ರಾಜಶೇಖರ್ ಕೆ.ಎಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು. ಅನೇಕರು ನೇತ್ರ ದಾನ ಮಾಡಿದರು.