ಪೆರಾಜೆ, ಜು. ೬: ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾ ಸಭೆಯು ದೇವಾ ಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ಶ್ರೀ ಶಾಸ್ತಾವು ಸಭಾಂಗಣದಲ್ಲಿ ನಡೆಯಿತು.
ದೇವಸ್ಥಾನದ ಮುಂದಿನ ಒಂದು ವರ್ಷದ ಅವಧಿಗೂ ಆಡಳಿತ ಮೊಕ್ತೇಸರರಾಗಿ ಜಿತೇಂದ್ರ ನಿಡ್ಯಮಲೆ, ಕಾರ್ಯದರ್ಶಿಯಾಗಿ ತೇಜಪ್ರಸಾದ್ ಅಮಚೂರು ಅವರನ್ನು ಮುಂದುವರೆಸುವುದಾಗಿ ತೀರ್ಮಾನಿಸಲಾಯಿತು, ಹಾಗೂ ಮುಂದಿನ ಅವಧಿಗೆ ದೇವಸ್ಥಾನದ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿಯಾಗಿ ಚಿನ್ನಪ್ಪ ಅಡ್ಕ ಅವರನ್ನು ಆಯ್ಕೆಮಾಡಲಾಯಿತು. ಕಾರ್ಯಕ್ರಮದ ಕುರಿತು ಅಧ್ಯಕ್ಷ ನಿಡ್ಯಮಲೆ ಜಿತೇಂದ್ರ ಅವರು ಪ್ರಾಸ್ತಾವಿಕ ಮಾತನಾಡಿದರು. ಮಹಾಸಭೆಯ ವರದಿಯನ್ನು ಹಾಗೂ ಆಡಳಿತ ಸಮಿತಿಯ ವರದಿ ಮತ್ತು ಲೆಕ್ಕಪತ್ರ ಮಂಡನೆಯನ್ನು ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು ಸಭೆಗೆ ಮಂಡಿಸಿದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ದೇವಸ್ಥಾನದಲ್ಲಿ ನೂತನವಾಗಿ ಪ್ರಾರಂಭಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಡಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೂರು ಜನ ಪ್ರತಿಭಾವಂತ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಕೆ.ಡಿ, ಅನುಜ್ಞ. ಎನ್.ಹೆಚ್, ಹಿಮಶ್ರೀ ಕೆ.ಬಿ. ಇವರುಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರುಗಳಾದ ಕೋಡಿ ಬಾಸ್ಕರ, ಕುಂಬಳಚೇರಿ ಗಣಪತಿ, ಮೂಲೆಮಜಲು ವಿಶ್ವನಾಥ, ನಿಡ್ಯಮಲೆ ಪುರುಷೋತ್ತಮ, ಪ್ರಭಾಕರ ಕೋಡಿ, ದೇವತಕ್ಕ ರಾಮಕಜೆ ರಾಜುಗೋಪಾಲ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಾಜಿ ಮೊಕ್ತೇಸರುಗಳು, ಜನಪ್ರತಿನಿಧಿಗಳು, ಭಕ್ತಾದಿಗಳು, ಗ್ರಾಮಸ್ಥರು ಇದ್ದರು.