ವೀರಾಜಪೇಟೆ, ಜು. ೫: ವೀರಾಜಪೇಟೆ ಪಟ್ಟಣ ಪಂಚಾಯಿತಿ ಪುರಸಭೆ ಆದ ಬಳಿಕ ಮೊದಲ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಬೇಕಿದ್ದು, ಸರ್ಕಾರ ನಿಗದಿ ಮಾಡುವ ಮೀಸಲಾತಿಗೆ ಬಹುತೇಕ ಸದಸ್ಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯರು ಯಾವುದೇ ಮೀಸಲಾತಿ ಬಂದರು ಪಕ್ಷೇತರರು ಹಾಗೂ ಶಾಸಕರ ಬೆಂಬಲದಿAದ ಪುರಸಭೆ ಅಧಿಕಾರ ಹಿಡಿಯುತ್ತೇವೆ ಎಂಬ ಉತ್ಸುಕದಲ್ಲಿದ್ದಾರೆ.
೨೦೧೯ ರ ಅಕ್ಟೋಬರ್ ೨೮ ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭ ಸರ್ಕಾರ ನಿಗದಿಪಡಿಸಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಶ್ನಿಸಿ ವಿವಿಧ ಸಂಘ-ಸAಸ್ಥೆಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕಾರಣ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಒಂದೂವರೆ ವರ್ಷಗಳ ಕಾಲ ಅಂದಿನ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳ ಆಡಳಿತದಲ್ಲಿತ್ತು.
ನ್ಯಾಯಾಲಯ ಆದೇಶದಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನ ಬಿಸಿಎಂ(ಬಿ)ಗೆ ಒಲಿದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಒಳಗೆ ಪೈಪೋಟಿ ಏರ್ಪಟ್ಟು ಅಂದಿನ ಶಾಸಕ ಕೆ.ಜಿ. ಬೋಪಯ್ಯ ಅವರ ಕೃಪಾಕಟಾಕ್ಷದಿಂದ ಸುಶ್ಮಿತಾ ಅವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೆ.ಬಿ. ಹರ್ಷವರ್ಧನ್ ಆಯ್ಕೆಯಾಗಿದ್ದರು. ಉಪಾಧ್ಯಕ್ಷ ಕೆ.ಬಿ. ಹರ್ಷವರ್ಧನ್ ವಿಧಿವಶ ಆದ ಕಾರಣ ಆ ಸ್ಥಾನಕ್ಕೆ ಚುನಾವಣೆ ನಡೆದು ಮಂಡೇಪAಡ ವಿನಾಂಕ್ ಕುಟ್ಟಪ್ಪ ಉಪಾಧ್ಯಕ್ಷರಾದರು. ಕಳೆದ ತಿಂಗಳು ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು ಮತ್ತೆ ಪುರಸಭೆ ಆಡಳಿತಾಧಿಕಾರಿಗಳ ಕೈ ಸೇರಿದೆ.
ಪುರಸಭೆಯಲ್ಲಿ ಒಟ್ಟು ೧೮ ಸ್ಥಾನಗಳಿದ್ದು ಬಿಜೆಪಿ ೮, ಕಾಂಗ್ರೆಸ್ ೬, ಜೆಡಿಎಸ್ ೧, ಪಕ್ಷೇತರರು ೩ ಸ್ಥಾನಗಳನ್ನು ಪಡೆದುಕೊಂಡಿವೆ. ಕಳೆದ ಬಾರಿ ಜೆಡಿಎಸ್ನಿಂದ ಆಯ್ಕೆಯಾದ ಮತೀನ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ೧೮ ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಕಳೆದ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೊಬ್ಬರನ್ನು ಅಂಗಲಾಚುವ ಪರಿಸ್ಥಿತಿ ಎದುರಾಗಿತ್ತು. ರಾಜಕೀಯ ತಂತ್ರಗಾರಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತ್ತು.
ಬದಲಾದ ರಾಜಕೀಯ ವಿದ್ಯಮಾನಗಳಿಂದ ಈ ಬಾರಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕಾಗಿ ತೀವ್ರ ಲಾಭಿ ನಡೆಸುತ್ತಿದೆ. ಸರ್ಕಾರದ ಯಾವುದೇ ಮೀಸಲಾತಿ ಬಂದರೂ ಕೂಡ ನಾವು ಅಧಿಕಾರ ಹಿಡಿಯುತ್ತೇವೆ ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೀಸಲಾತಿಯಲ್ಲಿ ಸಾಮಾನ್ಯ ಸ್ಥಾನ ಲಭಿಸಿದರೆ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪಟ್ಟಡ ರಂಜಿ ಪೂಣಚ್ಚ ಅವರಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತಿದ್ದರೂ ಜಾತಿಯ ಆಧಾರದಲ್ಲಿ ಶಾಸಕರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ನಗರ ಅಧ್ಯಕ್ಷರು ಕೊಡವ ಜನಾಂಗಕ್ಕೆ ಸೇರಿದವರಾಗಿರುವದರಿಂದ ಇತರರಿಗೆ ಮಣೆ ಹಾಕುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.
ಬಿಎಸಿಎಂ(ಎ) ಮೀಸಲಾತಿ ಬಂದರೆ ಸಿ.ಕೆ ಪೃಥ್ವಿನಾಥ್, ಮಹಮದ್ ರಫಿ, ಡಿ.ಪಿ. ರಾಜೇಶ್, ಎಸ್.ಹೆಚ್. ಮತೀನ್, ಅಗಸ್ಟಿನ್ ಬೆನ್ನಿ ಆಕಾಂಕ್ಷಿಗಳಾಗಿದ್ದಾರೆ. ಈವರೆಗೆ ಕಾಂಗ್ರೆಸ್ನಲ್ಲಿ ಮಲೆಯಾಳಿ ಜನಾಂಗಕ್ಕೆ ಅಧ್ಯಕ್ಷ ಸ್ಥಾನ ಲಭಿಸಿಲ್ಲ ಎಂಬ ಕಾರಣದಿಂದ ಹಿರಿಯ ಕಾಂಗ್ರೆಸಿಗ ಹಲವು ವರ್ಷದಿಂದ ಪಕ್ಷಕ್ಕಾಗಿ ದುಡಿದವರು ಎಂಬ ಬೇಡಿಕೆಯನ್ನು ಸಿ.ಕೆ. ಪೃಥ್ವಿನಾಥ್ ಇಟ್ಟಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಇಡೀ ಮುಸ್ಲಿಂ ಜನಾಂಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ, ಮುಸ್ಲಿಂ ಜನಾಂಗಕ್ಕೆ ಪ್ರಾತಿನಿತ್ಯ ನೀಡಬೇಕು ಎಂಬ ಬೇಡಿಕೆ ಮಹಮದ್ ರಫಿ ಮತ್ತು ಮತೀನ್ ಇಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ವರಿಷ್ಠರ ನಿರ್ಧಾರ ಯಾರ ಮೇಲಿದೆ ಎಂಬುದು ಮೀಸಲಾತಿಯ ಮೇಲಿದೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಅನಿತಾ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
೮ ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದರು ಮತ ಚಲಾಯಿಸುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಪಕ್ಷೇತರ ಬೆಂಬಲ ನಮಗಿದೆ ಎಂದು ಹೇಳಿಕೊಳ್ಳುವ ಬಿಜೆಪಿಯ ನಡೆ ಕುತೂಹಲ ಮೂಡಿಸಿದೆ. ೭ ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್, ಶಾಸಕರು ಮತ್ತು ಪಕ್ಷೇತರರ ಸಹಕಾರದಿಂದ ಅಧಿಕಾರ ಹಿಡಿಯುತ್ತೇವೆ ಎಂಬ ಉತ್ಸಾಹದಲ್ಲಿದೆ. ಒಂದು ವೇಳೆ ಸರ್ಕಾರದ ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ಎಂದು ಘೋಷಣೆ ಆದರೆ ಯಾವುದೇ ಪೈಪೋಟಿ ಇಲ್ಲದೆ ಅಧ್ಯಕ್ಷ ಸ್ಥಾನ ಬಿಜೆಪಿಯ ಸಭಾಷ್ ಮಹಾದೇವ್ ಅವರ ಪಾಲಾಗಲಿದೆ.
ಚುನಾಯಿತ ಸದಸ್ಯರುಗಳು: ಆಶಾ ಸುಬ್ಬಯ್ಯ, ಬಿ.ಕೆ. ಅನಿತಾ, ಹೆಚ್.ಎನ್. ಪೂರ್ಣಿಮಾ, ಸುಬಾಷ್ ಮಹಾದೇವ್, ಟಿ.ಕೆ. ಯಶೋಧ, ಟಿ.ಎಂ. ಸುನೀತಾ, ಟಿ.ಆರ್. ಸುಶ್ಮಿತಾ, ವಿನಾಂಕ್ ಕುಟ್ಟಪ್ಪ (ಬಿಜೆಪಿ), ಪಟ್ಟಡ ರಂಜಿ ಪೂಣಚ್ಚ, ಸಿ.ಕೆ. ಪೃಥ್ವಿನಾಥ್, ಅಗಸ್ಟಿನ್ ಬೆನ್ನಿ, ಡಿ.ಪಿ. ರಾಜೇಶ್, ಮಹಮದ್ ರಫಿ, ತಬಸಮ್, ಎಸ್.ಹೆಚ್. ಮತೀನ್ (ಕಾಂಗ್ರೆಸ್), ದೇಚಮ್ಮ ಕಾಳಪ್ಪ, ಜಲೀಲ್, ರಜನಿಕಾಂತ್ (ಪಕ್ಷೇತರರು). - ಪಳೆಯಂಡ ಪಾರ್ಥ ಚಿಣ್ಣಪ್ಪ