ಸುಂಟಿಕೊಪ್ಪ, ಜು. ೪ : ಇಲ್ಲಿನ ವಂದನಾ ಬಾರ್ ಎದುರು ಕಳೆದ ರಾತ್ರಿ ಸಂಭವಿಸಿದ ಅಪ ಘಾತದಲ್ಲಿ ಮೃತಪಟ್ಟ ಮುಂಬೈ ಮೂಲದ ಮಹಿಳೆಯ ಮೃತದೇಹವನ್ನು ಇಂದು ಮುಂಬೈಗೆ ಸಾಗಿಸಲಾಗಿದೆ.
ಮುಂಬೈ ನಿವಾಸಿ ಸುಧೀರ್ ಚಂದನೀಯ ಎಂಬವರು ರಿಲಾಯನ್ಸ್ ಕಂಪನಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಪುತ್ರನನ್ನು ಮಣಿಪಾಲದ ಕಾಲೇಜಿನಲ್ಲಿ ಎಂಬಿಎ ತರಗತಿಗೆ ಸೇರಿಸಿದ ಬಳಿಕ ಪತ್ನಿ ಸೀಮಾ ಅವರೊಂದಿಗೆ ಉಡುಪಿ ಮೂಲದ ಚಾಲಕ ಮಹಮ್ಮದ್ ರಫೀಕ್ ಎಂಬವರ ಬಾಡಿಗೆ ವಾಹನ ಮಾರುತಿ ಎರ್ಟಿಗ (ಕೆಎ೨೦-ಎಬಿ೫೯೮೪)ಕಾರಿನಲ್ಲಿ ಮಡಿಕೇರಿಗೆ ಬಂದಿದ್ದು ಸುಂಟಿಕೊಪ್ಪ ಸಮೀಪದ ರೆಸಾರ್ಟ್ವೊಂದರಲ್ಲಿ ಉಳಿದುಕೊಂಡಿದ್ದರು.
ಸೋಮವಾರದಂದು ಕಾರಿನಲ್ಲಿ ಮಡಿಕೇರಿಯಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ ರೆಸಾರ್ಟ್ಗೆ ಹಿಂತಿರುಗುತ್ತಿದ್ದ ಸಂದರ್ಭ ಗದ್ದೆಹಳ್ಳದ ವಂದನಾ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗದಲ್ಲಿ ಕಾರು ಹಾಗೂ ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ಲಾರಿ(ಎಪಿ೩೯-ಯುಬಿ೩೬೭೯) ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಸೀಮಾ ಅವರಿಗೆ ಗಂಭೀರ ಗಾಯವಾಗಿದ್ದು, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನಕಾರಿಯಾಗದೆ ಮೃತಪಟ್ಟಿದ್ದಾರೆ. ಲಾರಿ ಇನ್ನು ೨ ದ್ವಿಚಕ್ರವಾಹನಗಳನ್ನು ಜಖಂಗೊಳಿಸಿದ್ದು, ವಂದನಾ ಬಾರ್ನ ತಡೆಗೋಡೆಗೂ ಹಾನಿಯಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಧಾವಿಸಿ ಅಪಘಾತಕ್ಕೀಡಾದ ವಾಹನಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ, ಲಾರಿ ಚಾಲಕ ಆಂಧ್ರ ಮೂಲದ ಶ್ರೀಧರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.