ಮಡಿಕೇರಿ, ಜು. ೪ : ಮನೆಯಂಗಳಕ್ಕೆ ಕಾಡಾನೆ ದಾಳಿ ಇಟ್ಟು ಬಾಳೆ, ಅಡಿಕೆ, ಪಪ್ಪಾಯ ಇನ್ನಿತರ ಹಣ್ಣಿನ ಗಿಡಗಳನ್ನು ನಾಶಪಡಿಸಿರುವುದೇ ಅಲ್ಲದೇ ಹೂಕುಂಡ ಹಾಗೂ ಗಿಡಗಳಿಗೆ ಹಾನಿ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕು ಬಾಳಾಜಿ ಗ್ರಾಮದಲ್ಲಿ ನಡೆದಿದೆ.

ಆನೆಯ ಚಲನವಲನ ಗುರುತಿಸುವ ಸಲುವಾಗಿ ಕುತ್ತಿಗೆಗೆ ‘ರೇಡಿಯೋ ಕಾಲರ್’ ಅಳವಡಿಸಿರುವ ಭಾರೀ ಆನೆಯೊಂದು ಸಣ್ಣುವಂಡ ವಿಶ್ವನಾಥ್ ಎಂಬವರ ಮನೆ ಅಂಗಳಕ್ಕೆ ನುಗ್ಗಿ ದಾಂಧಲೆ ನಡೆಸಿರುವ ದೃಶ್ಯಾವಳಿಗಳು ಅವರ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾದ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಬೆಳಗ್ಗಿನ ಜಾವ ೧ ಗಂಟೆಗೆ ಸಮಯದಲ್ಲಿ ದಾಳಿ ಮಾಡಿರುವ ಭಾರೀ ಗಾತ್ರದ ಗಂಡಾನೆ ಸರಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ದಾಂಧಲೆ ನಡೆಸಿರುವುದು ಕಂಡುಬAದಿದೆ.

ಈ ಕುರಿತು ಸ್ಥಳೀಯ ಗ್ರಾ.ಪಂ. ಸದಸ್ಯ ಟಾಟು ಮೊಣ್ಣಪ್ಪ ಅವರ ಮುಖಾಂತರ ತಿತಿಮತಿ ಅರಣ್ಯ ವಲಯದ ಅಧಿಕಾರಿಗಳಿಗೆ ತಿಳಿಸಿದ ಮೇರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಕುರಿತು ರೈತ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಿದ್ದು, ಮಾಯಮುಡಿ ವಲಯ ಅಧ್ಯಕ್ಷ ರಾಯ್ ಮಾದಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಆನೆ ಮತ್ತೊಂದು ಆನೆಯೊಂದಿಗೆ ಕಾದಾಟದಲ್ಲಿ ಗಾಯಗೊಂಡಿದ್ದು, ಅರಣ್ಯ ಇಲಾಖೆಯವರು ಅದನ್ನು ಮತ್ತು ಬರಿಸಿ ಹಿಡಿದು ಸೂಕ್ತ ಶುಶ್ರೂಷೆ ನೀಡಿ ‘ರೇಡಿಯೋ ಕಾಲರ್’ ಅಳವಡಿಸಿ ಬಿಟ್ಟಿರುವುದಾಗಿ ಭೇಟಿ ನೀಡಿದ ಅರಣ್ಯ ಇಲಾಖಾ ಸಿಬ್ಬಂದಿಗಳು ತಿಳಿಸಿದ್ದಾರೆ.