ಸೋಮವಾರಪೇಟೆ, ಜು.೫ : ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರು ಬಳಿಯಲ್ಲಿ ಬೈಕ್ ಮೇಲೆ ಮರಬಿದ್ದು ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ನಡೆದಿದೆ.

ಕುಶಾಲನಗರದ ನಿವಾಸಿ ಸುನಕ್ ಎಂಬವರು ಮಡಿಕೇರಿಗೆ ತೆರಳಿ ಅಲ್ಲಿಂದ ಕೆಲಸ ನಿಮಿತ್ತ ಸೋಮವಾರಪೇಟೆಗೆ ಬರುತ್ತಿದ್ದ ಸಂದರ್ಭ ಐಗೂರಿನ ವಿದ್ಯಾನಗರದ ಬಳಿ ಟಾಟಾ ಕಾಫಿ ಎಸ್ಟೇಟ್‌ಗೆ ಸೇರಿದ ಮರವೊಂದು ಗಾಳಿ ಮಳೆಗೆ ಬುಡ ಸಹಿತ ಧರಾಶಾಹಿಯಾಗಿದೆ.

ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತಂತಿಯ ಮೇಲೆ ಬಿದ್ದ ನಂತರ ರಸ್ತೆಗೆ ಮರ ಉರುಳಿದ್ದು, ಇದೇ ಸಂದರ್ಭ ರಸ್ತೆಯಲ್ಲಿ ತೆರಳುತ್ತಿದ್ದ ಸುನಕ್, ಬೈಕ್ ಸಹಿತ ಮರದ ಕೆಳಗೆ ಸಿಲುಕಿಕೊಂಡಿದ್ದಾರೆ. ಮರದ ಕೊಂಬೆಯೊAದು ರಸ್ತೆಗಿಂತ ೩ ಅಡಿ ಮೇಲ್ಭಾಗದಲ್ಲಿ ತಡೆಯಂತೆ ಇದ್ದುದರಿಂದ ಪ್ರಾಣಾಪಾಯ ತಪ್ಪಿದೆ.

ಘಟನೆಯಿಂದ ಬೈಕ್ ಚಾಲಕ ಸುನಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಬೈಕ್ ಜಖಂಗೊAಡಿದೆ. ತಕ್ಷಣ ಇತರ ವಾಹನಗಳ ಪ್ರಯಾಣಿಕರು ಸುನಕ್‌ನನ್ನು ಹೊರಗೆಳೆದಿದ್ದಾರೆ.

ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು, ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳು, ಗ್ರಾ.ಪಂ. ಸಿಬ್ಬಂದಿಗಳು, ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿದರು. ಸುಮಾರು ಅರ್ಧಗಂಟೆ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬಸ್‌ಗಳು ಕಾಜೂರು ಮಾರ್ಗವಾಗಿ ಮಡಿಕೇರಿ ಹಾಗೂ ಸೋಮವಾರಪೇಟೆಗೆ ತೆರಳಿದವು.