ಮಡಿಕೇರಿ, ಜು.೪ : ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಗೆ ತೆರವಾದ/ ಖಾಲಿ ಇರುವ ಕೊಡಗು ಜಿಲ್ಲೆಯ ೫ ಗ್ರಾಮ ಪಂಚಾಯಿತಿಗಳ ೯ ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿಯ ೪, ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ೧, ಮಡಿಕೇರಿ ತಾಲೂಕಿನ ಎಮ್ಮೆಮಾಡುವಿನ ೨, ಕಾಂತೂರು ಮೂರ್ನಾಡುವಿನ ೧ ಹಾಗೂ ಕಡಗದಾಳುವಿನ ೧ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾ. ೬ ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ತಾ. ೧೨ ಕೊನೆಯ ದಿನವಾಗಿದೆ. ತಾ. ೧೩ ರಂದು ನಾಮಪತ್ರ ಪರಿಶೀಲನೆ, ತಾ. ೧೫ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ತಾ. ೨೩ ರಂದು ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಮರು ಮತದಾನವು ತಾ. ೨೫ ರಂದು ನಡೆಯಲಿದೆ. ತಾ. ೨೬ ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.