ಕರಿಕೆ, ಜು. ೫: ಕೊಡಗು ಜಿಲ್ಲೆಯ ಗಡಿಯಂಚಿನ ಗ್ರಾಮ ಕರಿಕೆ ಜಿಲ್ಲೆಯಲ್ಲಿ ಅತೀ ಹೆಚ್ಚು ಜಲಪಾತ ಹೊಂದಿರುವ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಭಾಗಮಂಡಲದಿAದ ಕರಿಕೆಯತ್ತ ಸುಮಾರು ಹದಿನೈದು ಕಿ.ಮಿ ನಷ್ಟು ದೂರ ತಲಕಾವೇರಿ ವನ್ಯಧಾಮದೊಳಗೆ ಬರುವ ಅಂತರ್‌ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸಿದಾಗ ೩೦ಕ್ಕೂ ಅಧಿಕ ಝರಿಗಳು ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತವೆ.

ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಈ ಜಲಕನ್ಯೆಯರು ಧುಮ್ಮಿಕ್ಕಿ ಹರಿಯುವ ದೃಶ್ಯಗಳನ್ನು ನೋಡಲು ಕರಿಕೆ ಗ್ರಾಮಕ್ಕೆ ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಬರುತ್ತಿದ್ದಾರೆ. ಮೂವತ್ತಕ್ಕೂ ಅಧಿಕ ಜಲಪಾತಗಳು ಐವತ್ತು ಅಡಿಗೂ ಅಧಿಕ ಎತ್ತರದಿಂದ ಹೆದ್ದಾರಿಯ ಒಂದೇ ಬದಿಯಲ್ಲಿ ಧುಮ್ಮಿಕ್ಕುವ ದೃಶ್ಯ ಕಾಣಸಿಗುವುದು ಮಾತ್ರವಲ್ಲದೇ ಇದು ವನ್ಯಜೀವಿ ಅಭಯಾರಣ್ಯ ಮತ್ತು ಮೀಸಲು ಅರಣ್ಯದ ಮಧ್ಯೆ ಮಾತ್ರ ಕಾಣಸಿಗುವುದು ಮತ್ತೊಂದು ವಿಶೇಷ. ಸುಮಾರು ೧೯ ಕಿಲೋಮೀಟರ್ ದೂರದ ರಸ್ತೆಯಲ್ಲಿ ಒಂದರAತೆ ಒಂದು ಜಲಪಾತಗಳು ಈ ಭಾಗದಲ್ಲಿ ಕಾಣಸಿಗುತ್ತವೆ. ಮಡಿಕೇರಿಯಿಂದ ೫೧ ಕಿಲೋಮೀಟರ್ ದೂರ ಹಾಗೂ ಕೇರಳ ಗಡಿಯಿಂದ ಹನ್ನೆರಡು ಕಿ.ಮಿ. ದೂರ ಸಮೀಪದ ದ.ಕ.ಜಿಲ್ಲೆಯ ಸುಳ್ಯದಿಂದ ೩೫ ಕಿಲೋಮೀಟರ್ ದೂರದಲ್ಲಿ ಜಲಪಾತಗಳು ಕಂಡು ಬರುತ್ತವೆ. ಕೇರಳ ಹಾಗೂ ಕೊಡಗಿನ ಮುಖಾಂತರ ಮಾತ್ರ ಈ ಭಾಗಕ್ಕೆ ಪ್ರವೇಶಿಸಬಹುದು.

ಕರಿಕೆಯಿಂದ ಭಾಗಮಂಡಲ ರಸ್ತೆಯಲ್ಲಿ ಮಳೆಗಾಲದಲ್ಲಿ ಧುಮ್ಮಿಕ್ಕುವ ಈ ಜಲಪಾತಗಳು ಸ್ವರ್ಗವನ್ನೇ ಸೃಷ್ಟಿಸುತ್ತವೆ. ಕೊಡಗಿನ ಗಡಿಗೆ ಹೊಂದಿಕೊAಡಿರುವ ಕರಿಕೆ ಗ್ರಾಮವು ಸುತ್ತಲೂ ಬೆಟ್ಟ ಗುಡ್ಡ ಹಾಗು ದಟ್ಟ ಕಾಡಿನಿಂದ ಆವರಿಸಿದ, ಪಟ್ಟಣದ ಸಂಪರ್ಕದಿAದ ದೂರ ಇರುವ ಕಾರಣ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳದಂತಿದೆ.

-ಸುಧೀರ್ ಹೊದ್ದೆಟ್ಟಿ