(ಹೆಚ್.ಜೆ. ರಾಕೇಶ್)
ಮಡಿಕೇರಿ, ಜು. ೪: ಜರ್ಮನ್ ತಂತ್ರಜ್ಞಾನ ಅನುಸರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಿದ ಬೃಹತ್ ತಡೆಗೋಡೆ ಇದೀಗ ಅಪಾಯದ ಮನ್ಸೂಚನೆ ತೋರುತ್ತಿದ್ದು, ಬರೆಗೆ ಅಡ್ಡಲಾಗಿ ಮಳೆ ನೀರು ನುಗ್ಗದಂತೆ ಹೊದಿಸಿದ್ದ ಬೃಹತ್ ‘ಟಾರ್ಪಲ್’ ಅಲ್ಲಲ್ಲಿ ಕಿತ್ತು ಮಣ್ಣು ಜರಿಯಲಾರಂಭಿಸಿರುವುದು ಆತಂಕ ಸೃಷ್ಟಿಸಿದೆ.
ಕಳೆದ ೨ ವರ್ಷಗಳ ಹಿಂದೆ ಮಂಗಳೂರು-ಮಡಿಕೇರಿ ಹೆದ್ದಾರಿ ನಡುವಿನ ಜಿಲ್ಲಾಡಳಿತ ಭವನ ಎದುರಿನ ಬೃಹತ್ ಬರೆಗೆ ರೂ. ೭ ಕೋಟಿ ವೆಚ್ಚ ಮಾಡಿ ಲೋಕೋಪಯೋಗಿ ಇಲಾಖೆ ಮೂಲಕ ಜರ್ಮನ್ ತಂತ್ರಜ್ಞಾನ ಅನುಸರಿಸಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದರ ನಿರ್ಮಾಣದ ಗುತ್ತಿಗೆಯನ್ನು ಬೆಂಗಳೂರಿನ ಸಂಸ್ಥೆಯೊAದು ಪಡೆದಿತ್ತು. ನೂತನ ತಂತ್ರಜ್ಞಾನದ ‘ಆರ್.ಯು.ವಾಲ್’ ಹೆದ್ದಾರಿಗೆ ರಕ್ಷಣೆ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿ ಕಳೆದ ಮಳೆಗಾಲದಲ್ಲಿ ತಡೆಗೋಡೆಯ ಅಲ್ಲಲ್ಲಿ ಉಬ್ಬು ಹಾಗೂ ಬಿರುಕುಗಳು ಕಂಡು ಬಂದ ನಂತರ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ನಂತರದ ದಿನಗಳಲ್ಲಿ ಟಾರ್ಪಲ್ ಹೊದಿಸಿ ತಾತ್ಕಾಲಿಕ ರಕ್ಷಣೆಗೆ ಮುಂದಾಗಲಾಗಿತ್ತು. ಹೊದಿಸಿರುವ ಟಾರ್ಪಲ್ ಅನ್ನು ಕಟ್ಟಿ ಅದು ಹಾರದಂತೆ ಮಣ್ಣಿನ ಮೂಟೆಗಳನ್ನು ನೇತು ಹಾಕಲಾಗಿದೆ.
ಟೀಕೆಗೆ ಗುರಿಯಾಗಿದ್ದ ಯೋಜನೆ
ಅಂದು ವಿರೋಧ ಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಇದು ಅವೈಜ್ಞಾನಿಕ ಕಾಮಗಾರಿ ಎಂದು ಟೀಕಿಸಿತ್ತು. ಅಂದಿನ ವಿಪಕ್ಷ ನಾಯಕ, ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ
(ಮೊದಲ ಪುಟದಿಂದ) ಕೂಡ ಸ್ಥಳ ಪರಿಶೀಲಿಸಿ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದರು.
ಈ ಪ್ರಕರಣದ ವಿರುದ್ಧ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಿದ್ದವು. ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೂಡ ಈ ಕಾಮಗಾರಿಯ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ತಡೆಗೋಡೆಗೆ ಪೂರ್ತಿ ‘ಟಾರ್ಪಲ್’ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಗಾಗಿ ಜನರು ಅಧಿಕಾರಿಗಳ ಕಾರ್ಯವೈಖರಿಯನ್ನು ವ್ಯಂಗ್ಯವಾಡಿದ್ದರು. ಅಲ್ಲದೆ, ಈ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಅಧಿಕಾರಿಯ ವಿರುದ್ಧ ಕಾನೂನು ಹೋರಾಟಕ್ಕೂ ಕಾಂಗ್ರೆಸ್ ಹೆಜ್ಜೆಹಾಕಿತ್ತು.
ಮೇಲ್ನೋಟಕ್ಕೆ ಈ ಕಾಮಗಾರಿ ಸಮರ್ಪಕ ನಿರ್ವಹಣೆಯಾಗಿಲ್ಲ ಹಾಗೂ ಇನ್ನಿತರ ಪ್ರಕರಣಗಳನ್ನು ಆಧರಿಸಿ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ದೇವರಾಜು ಅವರನ್ನು ಈಗಾಗಲೇ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಮನವಿ ಮೇರೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆ ಹಿನ್ನೆಲೆ ಅಮಾನತ್ತು ಮಾಡಲಾಗಿದೆ.
ಪ್ಯಾನಲ್ಗಳ ತೆರವು
ತಡೆಗೋಡೆಯ ‘ಪ್ಯಾನಲ್’ಗಳನ್ನು ಕಳಚಿ ಮತ್ತೊಮ್ಮೆ ಕಾಮಗಾರಿಗೆ ಇಲಾಖೆ ಕೈ ಹಾಕಿದೆ. ೮೦ ಮೀಟರ್ ಉದ್ದದ ತಡೆಗೋಡೆಯ ಅರ್ಧ ಭಾಗದಷ್ಟು ಅಂದರೆ ೪೦ ಮೀಟರ್ನಷ್ಟಿನ ‘ಪ್ಯಾನಲ್’ಗಳನ್ನು ತೆರವು ಮಾಡಿ ನೂತನವಾಗಿ ಪ್ಯಾನಲ್ ಜೋಡಿಸುವ ಕಾರ್ಯಕ್ಕೆ ಮುಂದಾಗಲಾಗಿದೆ. ಆದರೆ, ವಿಳಂಬ ನಿರ್ಧಾರದ ಹಿನ್ನೆಲೆ ಮಳೆ ಆರಂಭವಾಗಿರುವುದರಿAದ ಕೆಲಸಕ್ಕೆ ವ್ಯತಿರಿಕ್ತ ಪರಿಣಾಮ ಎದುರಾಗಿದೆ.
ಪ್ಯಾನಲ್ ಜೋಡಿಸುವ ಮುನ್ನ ‘ಮೆಶ್’ಗಳನ್ನು ಅಳವಡಿಸಬೇಕಾಗಿದೆ. ಅದಾದ ನಂತರವಷ್ಟೆ ಪ್ಯಾನಲ್ ಅಳವಡಿಸಿ ತಡೆಗೋಡೆ ತಲೆ ಎತ್ತಬೇಕಾಗಿದೆ. ಮಳೆ ಚುರುಕಾಗಿರುವ ಕಾರಣ ಕೆಲಸ ಮಾಡಿದರೆ ಮತ್ತೆ ತಡೆಗೋಡೆ ಸುಸಜ್ಜಿತವಾಗಿ ನಿರ್ಮಾಣವಾಗುತ್ತ? ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಅಧಿಕಾರಿಗಳು ಕೂಡ ಮಳೆಗಾಲದಲ್ಲಿ ಕೆಲಸ ಕಷ್ಟದಾಯಕ ಎಂಬ ಉತ್ತರ ನೀಡುತ್ತಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಹೆದ್ದಾರಿ ಸಂಚಾರಿಗಳಲ್ಲಿ ಆತಂಕ
ಕಳೆದ ಕೆಲವು ದಿನಗಳಿಂದ ಸುರಿದ ಸಾಧಾರಣ ಮಳೆಗೆ ತಡೆಗೋಡೆಗೆ ಅಡ್ಡಲಾಗಿ ಹಾಕಿದ್ದ ಬೃಹತ್ ಟಾರ್ಪಲ್ ಕಿತ್ತು ಅದರೊಳಗಿನಿಂದ ಮಣ್ಣು ಜರುತ್ತಿರುವುದು ಹೆದ್ದಾರಿಯಲ್ಲಿ ಸಂಚಾರಿಗಳ ಭೀತಿಗೆ ಕಾರಣವಾಗಿದೆ. ಕೆಸರು ಮಿಶ್ರಿತ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಕಾಮಗಾರಿ ಸಮರ್ಪಕವಾಗಿಲ್ಲ ಎಂಬುದಕ್ಕೆ ಪುಷ್ಠಿ ನೀಡುತ್ತಿದೆ. ನೀರು ನುಗ್ಗಿದ ಪರಿಣಾಮವೇ ಪ್ಲಾಸ್ಟಿಕ್ ಕಿತ್ತು ಅದರೊಳಗೆ ನೀರು ಸೇರುತ್ತಿದೆ. ತೇವಾಂಶ ಹೆಚ್ಚಾಗಿ ಮಣ್ಣು ಸಡಿಲಗೊಂಡು ದೊಡ್ಡ ಅನಾಹುತ ಸಂಭವಿಸುವ ಮುನ್ನ ತಾತ್ಕಾಲಿಕವಾಗಿ ವೈಜ್ಞಾನಿಕ ಕ್ರಮವನ್ನು ಅನುಸರಿಸಬೇಕಾಗಿದೆ ಎಂದು ಸ್ಥಳೀಯರ ಒತ್ತಾಯವಾಗಿದೆ.
ಮಂಗಳೂರು, ಕೇರಳಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುವ ಕಾರಣದಿಂದ ಹೆದ್ದಾರಿ ರಕ್ಷಣೆಗಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಆದರೆ, ವ್ಯವಸ್ಥಿತವಾಗಿ ಕೆಲಸ ನಡೆಯದ ಪರಿಣಾಮ ಇದೀಗ ಹೆದ್ದಾರಿ ಸಂಚಾರಿಗಳಲ್ಲಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸೇರಿದಂತೆ ಜಿಲ್ಲಾಡಳಿತ ಭವನದ ಸಿಬ್ಬಂದಿಗಳಿಗೆ ಭೀತಿ ಎದುರಾಗಿದೆ.
ತಡೆಗೋಡೆಗೆ ಟಾರ್ಪಲ್ ಹೊದಿಸಿರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಳೆ ಹೆಚ್ಚಾಗಿ ಬರೆ ಜರಿದು ಹೆದ್ದಾರಿ ಕಡಿತಗೊಂಡರೆ ದೊಡ್ಡ ಮಟ್ಟದ ಸಮಸ್ಯೆ ಎದುರಾಗುತ್ತದೆ. ಇದನ್ನು ಅರಿತು ಬೇಸಿಗೆಯಲ್ಲಿಯೇ ಕೆಲಸ ಪೂರ್ಣ ಗೊಳಿಸಬೇಕಾಗಿತ್ತು ಎಂದು ವಿಳಂಬ ನೀತಿಯ ವಿರುದ್ಧ ಜನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಡೆಯುತ್ತಿರುವ ಅಧಿವೇಶನದಲ್ಲಿ ಕೊಡಗಿನ ಶಾಸಕರು ಈ ಕುರಿತು ಪ್ರಶ್ನೆ ಕೇಳುತ್ತಿರುವುದು ತಿಳಿದು ಮಳೆಯ ನಡುವೆ ಕೆಲಸಕ್ಕೆ ಕೈಹಾಕಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ದೂರಿದ್ದಾರೆ.
ಕಾಮಗಾರಿಯ ಮುಂದಿನ ಹಾದಿಯ ಕುರಿತು ಸ್ಪಷ್ಟತೆ ಯಾರಿಗೂ ಇಲ್ಲ. ಅಧಿಕಾರಿಗಳು ಮಳೆಗಾಲದಲ್ಲಿ ಕೆಲಸ ಕಷ್ಟ ಎಂಬ ಹಾರಿಕೆ ಉತ್ತರ ನೀಡುತ್ತಿದ್ದು, ಮಳೆಗಾಲದಲ್ಲಿ ಈ ಕೆಲಸ ಅಸಾಧ್ಯ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.