ಕುಶಾಲನಗರ, ಜು. ೪: ಜಿಲ್ಲೆಯಲ್ಲಿ ರಾಜಕೀಯ ಪರ್ವ ಬದಲಾವಣೆ ಕಂಡ ಬೆನ್ನಲ್ಲೇ, ಕುಶಾಲನಗರ ತಾಲೂಕಿನಾದ್ಯಂತ ಸರಕಾರಿ ಅಧಿಕಾರಿ ಸಿಬ್ಬಂದಿಗಳು ವರ್ಗಾವಣೆ ಭೀತಿಯ ನಡುವೆ ತಮ್ಮ ನೆಲೆಯನ್ನು ಭದ್ರಗೊಳಿಸುವಲ್ಲಿ ಆತಂಕಕ್ಕೀಡಾಗಿದ್ದು ದಿನನಿತ್ಯ ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ.

ವಿಶೇಷವಾಗಿ ಕುಶಾಲನಗರ ತಾಲೂಕಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ದಿನಗೂಲಿ ನೌಕರರ ಮೇಲೆ ಕೂಡ ಪಕ್ಷದ ಕೆಲವು ಕಾರ್ಯಕರ್ತರುಗಳು ವರ್ಗಾವಣೆಯ ಹೆಸರಿನಲ್ಲಿ ಹಿಂದೆ ಬಿದ್ದಿರುವುದು ಗುಟ್ಟಾಗಿ ಉಳಿದಿಲ್ಲ.

ಕ್ಷೇತ್ರದಲ್ಲಿ ಕಳೆದ ಕಾಲು ಶತಮಾನದ ನಡುವೆ ಅಧಿಕಾರ ಕಳೆದುಕೊಂಡಿದ್ದ ಪ್ರಸಕ್ತ ಆಡಳಿತ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದೀಗ ವಿವಿಧ ರೀತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ವರ್ಗಾವಣೆಯ ಭೂತ ಭರಿಸುವ ಮೂಲಕ ಹಲವರ ನಿದ್ರೆ ಕೆಡಿಸಿದಂತಿದೆ.

ಕ್ಷೇತ್ರದ ಶಾಸಕರಿಗೆ ಸ್ಥಳೀಯ ವಿದ್ಯಮಾನಗಳ ಮಾಹಿತಿಗಳ ಕೊರತೆ ನಡುವೆ ಈ ವರ್ಗಾವಣೆ ಪೆಡಂಭೂತ ತಾಲೂಕಿನ ಹಲವು ಅಧಿಕಾರಿ, ಸಿಬ್ಬಂದಿಗಳಿಗೆ ನುಂಗಲಾರದ ತುತ್ತು ಆದಂತಿದೆ.

ಕುಶಾಲನಗರ ಮತ್ತು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಕಂಡಿರುವ ಅಧಿಕಾರಿಗಳಿಗೆ ವರ್ಗಾವಣೆ ಸಾಮಾನ್ಯವಾದರೆ, ಇತ್ತ ವರ್ಗಾವಣೆಗೊಂಡು ಅವಧಿ ಪೂರೈಸದೆ ಕೇವಲ ಆರು ತಿಂಗಳು ಒಂದು ವರ್ಷ ಆದಂತಹ ಅಧಿಕಾರಿ ಸಿಬ್ಬಂದಿಗಳು ಕೂಡ ಈ ವರ್ಗಾವಣೆ ಪೆಡಂಭೂತದ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಬೆಳವಣಿಗೆಯಾಗಿದೆ.

ಕ್ಷೇತ್ರ ಬಿಜೆಪಿ ಶಾಸಕರ ತೆಕ್ಕೆಯಲ್ಲಿ ಇದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತಮ್ಮನ್ನು ಕಡೆಗಣಿಸಿರುವ ಆರೋಪವನ್ನೇ ಪ್ರಮುಖ ಕಾರಣವಾಗಿ ಇಟ್ಟುಕೊಂಡು ಇದೀಗ ಆಯಕಟ್ಟಿನ ಅಧಿಕಾರಿಗಳು ಸಿಬ್ಬಂದಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ವರ್ಗಾವಣೆಯ ಭೀತಿ ಸೃಷ್ಟಿಸಿದ್ದು, ಕೆಲವು ಸರಕಾರಿ ಅಧಿಕಾರಿ ಸಿಬ್ಬಂದಿಗಳು ಇದರಿಂದ ರೋಸಿ ಹೋಗಿ ನಾಟ್ ರೀಚಬಲ್ ಆಗಿರೋದು ಕಾಣಬಹುದು.

ಹಲವು ಅಧಿಕಾರಿ ಸಿಬ್ಬಂದಿಗಳು ವರ್ಗಾವಣೆಯ ಬೂತದಿಂದ ತಪ್ಪಿಸಿಕೊಳ್ಳಲು ನಿತ್ಯ ಕ್ಷೇತ್ರದ ಶಾಸಕರನ್ನು ಹುಡುಕಿಕೊಂಡು ಹೋಗುವುದರಲ್ಲಿ ಮಗ್ಧರಾಗಿದ್ದು ಇತ್ತ ಸರ್ಕಾರಿ ಕಚೇರಿಗಳು ಬಿಕೋ ಅನ್ನುವಂತಾಗಿದೆ.

ಆದರೆ ಕ್ಷೇತ್ರದ ಶಾಸಕರು ಮಾತ್ರ ಯಾವುದೇ ರೀತಿಯ ದ್ವೇಷ ಸಾಧನೆ ಮಾಡುವ ರಾಜಕೀಯ ಮಾಡುವುದಿಲ್ಲ ಎನ್ನುವ ಭರವಸೆಯನ್ನು ಎಲ್ಲರಿಗೂ ಬಹಿರಂಗವಾಗಿ ನೀಡಿದ್ದಾರೆ. ಸಾಮೂಹಿಕ ವರ್ಗಾವಣೆ ಮಾಡಿದಲ್ಲಿ ಆಡಳಿತ ವ್ಯವಸ್ಥೆ ಏರುಪೇರಾಗುವ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಕೆಲವು ಕಾರ್ಯಕರ್ತರು ಪಕ್ಷದ ಪ್ರಮುಖರು ಮಾತ್ರ ಸರಕಾರಿ ಅಧಿಕಾರಿ ಸಿಬ್ಬಂದಿಗಳ ವರ್ಗಾವಣೆ ವಿಷಯದಲ್ಲಿ ತಮ್ಮ ಬೆಂಬಿಡದ ಪ್ರಯತ್ನ ಮಾತ್ರ ಮುಂದುವರೆದಿರುವುದು ಎಲ್ಲರಿಗೂ ತಿಳಿದ ವಿಷಯ.

ಕೆಲವು ಮಂದಿ ದಿನಗೂಲಿ ನೌಕರರನ್ನು ಕೂಡ ಬಿಡದೆ ಅವರನ್ನು ಬದಲಾಯಿಸಿ ತಮ್ಮವರಿಗೆ ಆ ಹುದ್ದೆ ನೀಡುವ ಬಗ್ಗೆ ಶಾಸಕರ ಶಿಫಾರಸ್ಸು ಪಡೆಯಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ, ನೀರಾವರಿ ನಿಗಮ, ಶಿಕ್ಷಣ, ಅಬಕಾರಿ ಸೇರಿದಂತೆ ಸರಕಾರಿ ಕಚೇರಿಗಳ ಆಯಕಟ್ಟಿನ ಹುದ್ದೆಗಳ ಅಧಿಕಾರಿ ಸಿಬ್ಬಂದಿಗಳ ಹಿಡಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಕಳೆದ ಒಂದು ತಿಂಗಳಿನಿAದ ನಿತ್ಯ ನಡೆಯುತ್ತಿರುವುದನ್ನು ಗಮನಿಸಬಹುದು.

ಸರಕಾರಿ ನೌಕರರು ಸಿಬ್ಬಂದಿಗಳ ವರ್ಗಾವಣೆ ಹಿನ್ನಲೆಯಲ್ಲಿ ಕೆಲವೆಡೆ ನಿಗೂಢ ಒಡಂಬಡಿಕೆಗಳು ಕೂಡ ನಡೆಯುತ್ತಿರುವುದು ಶಕ್ತಿಗೆ ತಿಳಿದು ಬಂದಿದೆ. ಇದಕ್ಕೆ ಪೂರಕವೆಂಬAತೆ ಹಾರಂಗಿ ಅಣೆಕಟ್ಟು, ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಸಮಸ್ಯೆ ಎರಡು ಗುಂಪುಗಳ ಅಹವಾಲುಗಳೊಂದಿಗೆ ಶಾಸಕರ ತನಕ ಚರ್ಚೆಗೆ ಬಂದಿದ್ದು ಗಮನಾರ್ಹ.

ಇನ್ನೊಂದೆಡೆ ಗುತ್ತಿಗೆದಾರರು ಕೂಡ ಈ ರಾಜಕೀಯ ಬದಲಾವಣೆ ಪರ್ವದಲ್ಲಿ ತಮ್ಮ ನಡುವೆ ಆತಂಕದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಹಿಂದಿನ ಕಾಮಗಾರಿಯ ಮುಂದುವರಿಕೆ ಮತ್ತು ಹಳೆಯ ಕಾಮಗಾರಿಗಳ ಕೋಟ್ಯಂತರ ರೂಗಳ ಬಾಕಿ ಬಗ್ಗೆ ಚಿಂತೆಯಲ್ಲಿರುವುದು ಗೋಚರಿಸಿದೆ.

- ಸಿಂಚು