ಪೊನ್ನಂಪೇಟೆ, ಜು. ೪ : ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಪದ್ಮನಾಭ ರಾವ್ ಅವರ ಪುತ್ರ ಪ್ರಗತಿಪರ ಕೃಷಿಕ ಬಿ.ಪಿ.ರವಿಶಂಕರ್ ಅವರಿಗೆ ಸರ್ಕಾರದ ಕೃಷಿ ಇಲಾಖೆಯಿಂದ ೨೦೨೨-೨೩ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಘೋಷಣೆಯಾಗಿದೆ. ಬಿ.ಕಾಂ ಪದವೀಧರರಾಗಿರುವ ರವಿಶಂಕರ್ ಅವರು ತಮ್ಮ ಸಹೋದರ ಜೈಶಂಕರ್ ಅವರ ಸಹಕಾರದೊಂದಿಗೆ ಸಮಗ್ರ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದು, ಇವರು ಕೃಷಿಯ ಜೊತೆಗೆ ಅಂತರ್ಜಲ ರಕ್ಷಣೆ, ಮಣ್ಣಿನ ಸಮೃದ್ಧಿ ಮತ್ತು ಕಾರ್ಮಿಕ ವರ್ಗಕ್ಕೂ ಬಲ ನೀಡುವ ಪೂರಕ ಚಿಂತನೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ೩೩ ಎಕರೆ ಗದ್ದೆಯಲ್ಲಿ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ (ಮೊದಲ ಪುಟದಿಂದ) ಭತ್ತದ ಕೃಷಿ ಮಾಡುತ್ತಾ ಬರುತ್ತಿರುವ ಇವರು, ಸರಾಸರಿ ೭೫೦ ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ. ೨೦ ಕ್ಕೂ ಹೆಚ್ಚು ತಳಿಗಳನ್ನು ಬೆಳೆಯುವ ಮೂಲಕ, ಬಿತ್ತನೆ ಬೀಜ ಉತ್ಪಾದನೆ ಮಾಡುತ್ತಿರುವುದು ವಿಶೇಷತೆಯಾಗಿದೆ. ಇವರು ದೇಶ, ವಿದೇಶಗಳ ವಿವಿಧ ಬಗೆಯ ಹಣ್ಣುಗಳೂ ಸೇರಿದಂತೆ ಸುಮಾರು ೧೫೦ ಬಗೆಯ ಹಣ್ಣುಗಳನ್ನು ಮನೆಯಂಗಳ ಮತ್ತು ತೋಟದಲ್ಲಿ ಬೆಳೆಯುತ್ತಿದ್ದಾರೆ. ೧೫೦ಕ್ಕೂ ಹೆಚ್ಚು ತಳಿಯ ವಿವಿಧ ಬಗೆಯ ಹಲಸಿನ ಹಣ್ಣು ಬೆಳೆದು ಯಶಸ್ಸು ಸಾಧಿಸಿದ್ದಾರೆ.ಪ್ರಶಸ್ತಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ರವಿ ಶಂಕರ್ ಅವರು, ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಲಾಭಕ್ಕಿಂತ ಕೃಷಿಯ ಮೇಲೆ ತನಗಿರುವ ಆಸಕ್ತಿ ಮತ್ತು ಪ್ರೀತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಸಂಶೋಧನೆ ಮಾಡಿ, ಲಾಭವಾಗುವ ತಳಿಯನ್ನು ಬೆಳೆದು ಬಿತ್ತನೆ ಬೀಜವನ್ನು ಆಸಕ್ತರಿಗೆ ಮಾರಾಟ ಮಾಡಲಾಗುತ್ತಿದೆ. ಕೃಷಿಯಲ್ಲಿ ಇನ್ನೂ ಕಲಿಯುವುದು ಬಹಳಷ್ಟಿದೆ. ಕೃಷಿಯಲ್ಲಿನ ಸಾಧನೆಯಲ್ಲಿ ಸಹೋದರ ಜೈ ಶಂಕರ್ ಪಾತ್ರ ಕೂಡ ಮುಖ್ಯವಾಗಿದೆ ಎಂದು ಹೇಳಿದರು. ಪ್ರಶಸ್ತಿಯು ರೂ. ೫೦ ಸಾವಿರ ನಗದನ್ನು ಒಳಗೊಂಡಿದೆ. - ಚನ್ನನಾಯಕ