ಮಡಿಕೇರಿ, ಜು. ೪: ಕರಕುಶಲ ಶಿಲ್ಪ ಕಲಾವಿದರಾದ ಕೊಡಗಿನವರಾದ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅವರಿಗೆ ೨೦೨೨ನೇ ಸಾಲಿನ ವಚನ ಚಿತ್ರರಚನಾ ಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿ ದೊರೆತಿದೆ.

ಜೆ.ಎಸ್.ಎಸ್. ಮಹಾವಿದ್ಯಾಪೀಠದ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ರೂ. ೬೮ ಸಾವಿರ ನಗದು ಹಾಗೂ ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕಿರಣ್ ಸುಬ್ಬಯ್ಯ ಅವರು ಮೂಲತಃ ಪಾರಾಣೆ ಗ್ರಾಮದವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತ ಶಿಕ್ಷಣ ಶಾಲೆಯಲ್ಲಿ ಶಿಲ್ಪಕಲೆ ಅಭ್ಯಾಸ ಮಾಡಿದ ಇವರು ಹಲವಾರು ವೈಶಿಷ್ಯಪೂರ್ಣವಾದ ಶಿಲ್ಪಗಳನ್ನು ಕೆತ್ತನೆ ಮಾಡಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು, ಮೂರು, ನಾಲ್ಕು, ಐದು ಆಯಾಮಗಳಲ್ಲಿ ನೋಡಬಹುದಾದ ಶಿಲ್ಪಗಳನ್ನು ರಚಿಸಿರುವುದು ಇವರ ವೈಶಿಷ್ಟö್ಯ. ಇವರ ಹಲವಾರು ಶಿಲ್ಪಗಳು ಮೈಸೂರಿನ ಬಂಬೂಬಜಾರ್ ವೃತ್ತದಲ್ಲಿರುವ ಕೆ.ಎಸ್. ಮ್ಯೂಸಿಯಂ ಗ್ಯಾಲರಿಯಲ್ಲಿದೆ. ೧೩೫ ಹೆಡೆಗಳ ಆದೆಶೇಷನ ಕೆತ್ತನೆ ಸೇರಿದಂತೆ ಅನೇಕ ದೇವತೆಗಳ ವಿಗ್ರಹಗಳನ್ನು ಇವರು ರಚಿಸಿದ್ದಾರೆ. ಚಿತ್ರ ಕಲೆಯಲ್ಲಿನ ಸಾಧಕರನ್ನು ಪ್ರೋತ್ಸಾಹಿಸಲು ಮೈಸೂರು ಟಾಯ್ಸ್ನ ಸ್ಥಾಪಕರೂ ಹಾಗೂ ಕಲಾವಿದರಾದ ಎಂ. ವೀರಪ್ಪ ಅವರ ಹೆಸರಿನಲ್ಲಿ ಅವರ ಮಕ್ಕಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.