ಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಇದೀಗ ನಿಧಾನಗತಿಯಲ್ಲಿ ಮುಂಗಾರು ಮಳೆಯ ಲಕ್ಷಣ ಕಂಡು ಬರುತ್ತಿದೆ. ಪ್ರಸ್ತುತ ಆರ್ದ್ರಾ ಮಳೆ ನಕ್ಷತ್ರವಿದ್ದು, ಆರ್ದ್ರಾ ಮಳೆ ನಂಬಿಕೆ ಹುಟ್ಟಿಸುವಂತೆ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಹಿಡಿದು ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ಭಾರೀ ರಭಸದ ಮಳೆಯಾಗದಿದ್ದರೂ ದಿನವಿಡೀ ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಈಗಾಗಲೇ ಜೂನ್ ತಿಂಗಳು ಮುಕ್ತಾಯಗೊಂಡಿದ್ದರೂ ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಕಂಡುಬಾರದೆ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ಸಮಸ್ಯೆಯಾಗಿದೆ. ಇದೀಗ ಮೆಲ್ಲಗೆ ಮಳೆ ತನ್ನ ನೈಜ ಲಕ್ಷಣವನ್ನು ತೋರುತ್ತಿರುವದರಿಂದ ರೈತರಲ್ಲಿ ಆಶಾಭಾವನೆ ಮೂಡುತ್ತಿದೆ.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೦.೫೮ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಳೆ ಒಂದಷ್ಟು ಹೆಚ್ಚು ಸುರಿದಿದೆ. ಈ ತಾಲೂಕಿನಲ್ಲಿ ಸರಾಸರಿ ೧.೨೬ ಇಂಚು ಮಳೆಯಾಗಿದೆ. ಆದರೆ ವೀರಾಜಪೇಟೆ ಹಾಗೂ ಸೋಮವಾರಪೇಟೆ

(ಮೊದಲ ಪುಟದಿಂದ) ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಕಂಡುಬAದಿದೆ. ವೀರಾಜಪೇಟೆಯಲ್ಲಿ ೦.೧೬ ಹಾಗೂ ಸೋಮವಾರಪೇಟೆಯಲ್ಲಿ ೦.೩೧ ಪ್ರಮಾಣದಷ್ಟು ಮಾತ್ರ ಮಳೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಹೋಬಳಿಗಳಾದ ಮಡಿಕೇರಿ ಕಸಬಾದಲ್ಲಿ ೦.೮೮, ನಾಪೋಕ್ಲು ೦.೨೮, ಸಂಪಾಜೆ ೨.೫೬, ಭಾಗಮಂಡಲ ೧.೩೬, ಹುದಿಕೇರಿ ೦.೪೫, ಶಾಂತಳ್ಳಿ ೦.೮೬, ವಿಭಾಗದಲ್ಲಿ ಒಂದಷ್ಟು ಮಳೆಯಾಗಿದೆ. ಆದರೆ ಇನ್ನಿತರ ಹೋಬಳಿಗಳಲ್ಲಿ ಈ ಪ್ರಮಾಣ ಕಡಿಮೆ ಕಂಡುಬAದಿದೆ.

ಈತನಕದ ಮಳೆ ವಿವರ :ಜಿಲ್ಲೆಯಲ್ಲಿ ಜನವರಿಯಿಂದ ಈತನಕ ಪ್ರಸಕ್ತ ವರ್ಷ ೧೪.೨೭ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೩೫.೬೪ ಇಂಚಿನಷ್ಟಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ ೫೨.೪೦ ಇಂಚು ಮಳೆಯಾಗಿದ್ದು, ಈ ಬಾರಿ ೨೨.೭೬ ಇಂಚು ಮಾತ್ರವಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ೨೮.೯೫ ಇಂಚು ಮಳೆಯಾಗಿದ್ದು, ಈ ಬಾರಿ ೯.೭೮ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೨೫.೫೩ ಇಂಚು ಹಾಗೂ ಈ ಸಾಲಿನಲ್ಲಿ ೧೦.೨೭ ಇಂಚು ಮಳೆಯಾಗಿದೆ.