ಗೋಣಿಕೊಪ್ಪ, ಜು. ೪: ಕರಿಮೆಣಸು ಬೆಳೆಯ ನಂಜಾಣು ಬಳ್ಳಿಗಳ ಪುನಶ್ಚೇತನ ವಿಧಾನವನ್ನು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೋಣನಕಟ್ಟೆ ಗ್ರಾಮದ ಕುಶಾಲಪ್ಪ ಅವರ ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಕೆವಿಕೆ ಸಸ್ಯ ಸಂರಕ್ಷಣಾ ತಜ್ಞ ಡಾ. ಕೆ.ವಿ. ವೀರೇಂದ್ರಕುಮಾರ್ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಟ್ಟರು. ವಿವಿಧ ಸಮಗ್ರ ರೋಗ ನಿರ್ವಹಣಾ ತಂತ್ರಜ್ಞಾನಗಳನ್ನು ವರ್ಷದ ಜೂನ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪೆಪ್ಪೆರ್ ಸ್ಪೆಷಲ್ ಮತ್ತು ಸಮುದ್ರ ಕಳೆಯ ಸಿಂಪಡಣೆ, ಕಹಿ ಬೇವಿನ ಹಿಂಡಿಯ ಪುಡಿಯನ್ನು ಬುಡಕ್ಕೆ ಹಾಕುವ ಮತ್ತು ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಬುಡಕ್ಕೆ ಹಾಕುವುದು, ಡಿಸೆಂಬರ್ ತಿಂಗಳಿನಲ್ಲಿ ಪೊಟ್ಯಾಷಿಂ ನೈಟ್ರೇಟ್ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ತಿಳಿಸಿಕೊಡಲಾಯಿತು. ಇತ್ತೀಚೆಗೆ ಕರಿಮೆಣಸು ಬೆಳೆಗೆ ಅನೇಕ ರೋಗಗಳು ತೀವ್ರಗತಿಯಲ್ಲಿ ಹರಡುತ್ತಿದ್ದು, ಆರ್ಥಿಕ ಹಾನಿಯನ್ನುಂಟು ಮಾಡುತ್ತಿವೆ. ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಅಥವಾ ಬೆಳವಣಿಗೆಯೂ ಇಲ್ಲದೆ, ಫಲಸು ಬಿಡದೆ ಸಾಯುತ್ತಿವೆ. ಇದರ ನಿಯಂತ್ರಣ ಅವಶ್ಯ ಎಂದು ತಿಳಿಸಿದರು.