ಗೋಣಿಕೊಪ್ಪಲು, ಜು. ೩ : ಪ್ರೀತಿಸಿದ ಹುಡುಗಿಯನ್ನು ವಿವಾಹ ಮಾಡಿಕೊಡುವುದಾಗಿ ಯುವತಿಯ ಮನೆಗೆ ಕರೆಸಿಕೊಂಡು ನಂತರ ಮದುವೆಗೆ ನಿರಾಕರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಯುವಕನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಗೋಣಿಕೊಪ್ಪ ನಿವಾಸಿ ವೈ.ಆರ್. ದಿನೇಶ್ ಎಂಬಾತ ಯುವತಿ ಸೇರಿಸಿದಂತೆ ನಾಲ್ಕು ಮಂದಿಯ ಮೇಲೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ದೂರುದಾರ ವೈ.ಆರ್. ದಿನೇಶ್ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಕಲು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಯುವತಿಯ ಮನೆಯವರು ಮದುವೆ ವಿಷಯದಲ್ಲಿ ಮಾತನಾಡುವ ಎಂದು ಮನೆಗೆ ಕರೆಸಿಕೊಂಡಿದ್ದು, ತನ್ನನ್ನು ಮದುವೆ ಆಗಲು ಇಷ್ಟವಿಲ್ಲ ಎಂದು ಯುವತಿ ನಿರಾಕರಿಸಿದ್ದಾಳೆ. ಅಲ್ಲದೆ ಆಕೆಯ ಮನೆಯವರು ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ, ಬೆದರಿಕೆ ಕೂಡ ಒಡ್ಡಿದ್ದಾರೆ ಎಂದು ವೈ.ಆರ್. ದಿನೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಸ್ವೀಕರಿಸಿದ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ತನಿಖೆ ಮುಂದುವರಿಸಿದ್ದಾರೆ.