ಮಡಿಕೇರಿ, ಜು. ೪ : ಕೇಂದ್ರ ಸರಕಾರದ ಫಸಲ್ ಭೀಮಾ ಯೋಜನೆಯಡಿಯಲ್ಲಿ ಸೇರ್ಪಡೆ ಗೊಂಡಿದ್ದ ಕರಿಮೆಣಸು ಹಾಗೂ ಅಡಿಕೆ ಬೆಳೆಗಳನ್ನು ಇದೀಗ ಸರಕಾರ ತೆಗೆದುಹಾಕಿದ್ದು, ಈ ಬೆಳೆಗಳಿಗೆ ದೊರಕುತ್ತಿದ್ದ ವಿಮೆ ಸೌಲಭ್ಯದಿಂದ ಬೆಳೆಗಾರರು ವಂಚಿತರಾಗಿದ್ದಾರೆ. ಜಿಲ್ಲೆಯ ನೂತನ ಶಾಸಕರು ಈ ಬಗ್ಗೆ ಸದನದಲ್ಲಿ ಸರಕಾರದ ಗಮನ ಸೆಳೆಯುವಂತೆ ಮಾಜಿ ಕಾಫಿ ಬೋರ್ಡ್ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಅವರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ ಸಂಭವಿಸಿ ದಾಗ ರೈತರ ಖಾತೆಗೆ ನಷ್ಟ ಪರಿಹಾರದ ಹಣ ಜಮೆ ಆಗಿತ್ತು. ಆದರೆ ಕಾಫಿ ಫಸಲನ್ನು ಈ ಯೋಜನೆಯಡಿಯಲ್ಲಿ ಸೇರಿಸಬೇಕೆಂಬ ಬೆಳೆಗಾರರ ಕೂಗು ಅರಣ್ಯ ರೋಧನವಾಗಿಯೇ ಉಳಿದಿದೆ. ಕಾಫಿಯನ್ನು ಈ ಯೋಜನೆಯಡಿ ಯಲ್ಲಿ ಸೇರಿಸಬೇಕೆಂಬ ಬೆಳೆಗಾರರ ನಿರಂತರ ಒತ್ತಾಯದ ನಡುವೆ ಇದೀಗ ಯೋಜನೆಯಡಿ ಯಲ್ಲಿದ್ದ ಇನ್ನೆರಡು ಬೆಳೆಗಳನ್ನೂ ಸರಕಾರ ತೆಗೆದು ಹಾಕಿ ಅನ್ಯಾಯ ಮಾಡಿರುವುದಾಗಿ ಕಾವೇರಪ್ಪ ಅವರು ಆರೋಪಿಸಿದ್ದಾರೆ.