ನಾಪೋಕ್ಲು, ಜು. ೪: ಸಮೀಪದ ಮರಂದೋಡ ಗ್ರಾಮದ ಮೇರಿಯಂಡ ಅಪ್ಪಣ್ಣನವರ ತೋಟದಲ್ಲಿ ಸೇರಿ ಕೊಂಡಿದ್ದ ೧೨ ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಮೇರಿಯಂಡ ಅಪ್ಪಣ್ಣ ಅವರು ತೋಟಕ್ಕೆ ಕೆಲಸಗಾರರನ್ನು ಭಾನುವಾರ ಕರೆದುಕೊಂಡು ಹೋದ ಸಂದರ್ಭ ಕಾಳಿಂಗ ಸರ್ಪ ವನ್ನು ಕಂಡು ಭಯಗೊಂಡು ಕಾರ್ಮಿಕರು ಹಿಂತಿರುಗಿ ದ್ದಾರೆ. ಕೂಡಲೇ ಉರಗತಜ್ಞ ಪೊನ್ನೀರ ಸ್ನೇಕ್ ಗಗನ್ ಅವರಿಗೆ ತಿಳಿಸಿದ ಮೇರೆಗೆ ಅವರು ಆಗಮಿಸಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಪೆರುಂಬಾಡಿಯ ರಕ್ಷಿತಾರಣ್ಯಕ್ಕೆ ಬಿಟ್ಟರು. ಪತ್ರಿಕೆಯೊಂದಿಗೆ ಮಾತನಾಡಿದ ಪೊನ್ನೀರ ಗಗನ್ ಒಂದೇ ವಾರದಲ್ಲಿ ಎರಡು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಲಾಗಿದೆ. ಕಳೆದ ಶುಕ್ರವಾರ ವೀರಾಜಪೇಟೆಯ ಬಾಳುಗೋಡು ಗ್ರಾಮದ ಪುಚ್ಚಿಮಂಡ ತಿಮ್ಮು ತಿಮ್ಮಯ್ಯ ಅವರ ಮನೆಯ ಒಳಗಡೆ ಸೇರಿಕೊಂಡಿದ್ದ ೧೦ ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದೇನೆ ಎಂದರು. ಎಲ್ಲಾದರು ಸರ್ಪಗಳನ್ನು ಕಂಡರೆ ಕೊಲ್ಲದೆ ಸಮೀಪದ ಉರಗತಜ್ಞರಿಗೆ ಕರೆ ಮಾಡಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.