ನಾಪೋಕ್ಲು, ಜು. ೪: ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ನಲುಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ತೆಂಗು, ಬಾಳೆ, ಅನಾನಸ್ ಗಿಡಗಳನ್ನು ಧ್ವಂಸಗೊಳಿಸುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ .

ಸೋಮವಾರ ಸಂಜೆ ಮರಂದೋಡ ಗ್ರಾಮದ ಹಲವು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಕಾಫಿ, ಬಾಳೆ ಗಿಡಗಳನ್ನು ಧ್ವಂಸಪಡಿಸಿ ರಸ್ತೆಗಳಲ್ಲಿ ಎಳೆದೊಯ್ದಿರುವುದು ಕಂಡುಬAದಿದೆ. ಇಷ್ಟಕ್ಕೆ ತೃಪ್ತಿಯಾಗದ ಕಾಡಾನೆಗಳು ಗ್ರಾಮದ ನಿವಾಸಿ ಚೋಯಮಾಡಂಡ ಪೂಣಚ್ಚ ಅವರ ಮನೆಯ ಬಳಿ ಅಡ್ಡಾಡಿ ಕಿಟಕಿ ಮೂಲಕ ಮನೆಯೊಳಗಿದ್ದ ಮಕ್ಕಳ ಸಮವಸ್ತçವನ್ನು ಕಿತ್ತು ಎಸೆದು ತುಳಿದಿರುವುದಾಗಿ ಪೂಣಚ್ಚ ತಿಳಿಸಿದ್ದಾರೆ. ಇದರಿಂದಾಗಿ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು, ಮನೆಗಳಿಂದ ಹೊರಗೆ ಬರಲು ಭಯಪಡುವಂತಾಗಿದೆ.

ಭತ್ತದ ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸಲಾಗಿದ್ದು ಬಿತ್ತನೆಗೂ ಮುನ್ನವೇ ಆನೆಗಳು ಗದ್ದೆಗಳಲ್ಲಿ ಅಡ್ಡಾಡಿವೆ. ಬಿತ್ತನೆ ಮುಗಿದ ನಂತರ ಮತ್ತೆ ಕಾಡಾನೆಗಳು ಪೈರುಗಳನ್ನು ಧ್ವಂಸ ಮಾಡುವ ಆತಂಕವಿದ್ದು ಭತ್ತದ ಕೃಷಿ ಮಾಡುವುದು ಸಹ ಅಸಾಧ್ಯವಾಗಿದೆ ಎಂದು ಚೋಯಮಾಡಂಡ ಹರೀಶ್ ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ, ಸೂಕ್ತ ಕ್ರಮ ಕೈಗೊಂಡು ರೈತರಿಗೆ ಬೆಲೆ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.