ಸಂಪಾಜೆ, ಜು. ೨: ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರದ ಸಂಪಾಜೆ ಘಟಕದ ವತಿಯಿಂದ ಸಂಪಾಜೆಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದ ಶ್ರೀ ಬಾಲಚಂದ್ರ ಕಳಗಿ ವೇದಿಕೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರ ಬಿಸಿಲುಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರು - ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿ ಮಾತ ನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಕಾರ್ಯ ಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಂತ ನಾಯಕರನ್ನು ಸಮರ್ಥವಾಗಿ ಎದುರಿಸಬಲ್ಲ ಪ್ರತಾಪ್ ಸಿಂಹ ಅವರೇ ಮತ್ತೊಮ್ಮೆ ನಮ್ಮ ಮುಂದಿನ ಸಂಸದರಾಗಬೇಕು. ಪ್ರತಾಪ್ ಸಿಂಹ ಅವರೇ ನಮ್ಮ ಅಭ್ಯರ್ಥಿ ಎಂಬ ನಿಟ್ಟಿನಲ್ಲಿ ಕಾರ್ಯಕರ್ತರು ದುಡಿಯ ಬೇಕಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯೆ ರಮಾದೇವಿ ಕಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪಾಜೆ ಗ್ರಾಮದ ಪ್ರಮುಖ ಬೇಡಿಕೆಗಳನ್ನು ಸಂಸದರ ಗಮನಕ್ಕೆ ತಂದರು, ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಸುಬಮಣ್ಯ ಉಪಾಧ್ಯಾಯ, ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಪೆರಾಜೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್, ಮಡಿಕೇರಿ ಗ್ರಾಮಾಂತರ ಮಂಡಲ ಪ್ರಮುಖ ಗಿರೀಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಕುಮಾರ ಚೆದ್ಕಾರ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಜಗದೀಶ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.