ಚೆಯ್ಯಂಡಾಣೆ, ಜು. ೧. ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಬಿಟ್ಟು ಅಂಗಳಕ್ಕೆ ಲಗ್ಗೆ ಇಟ್ಟು ಆತಂಕ ಸೃಷ್ಟಿಸುತ್ತಿವೆ.
ಚೆಯ್ಯಂಡಾಣೆಯಲ್ಲಿ ವಿವೇಕ್ ಎಂಬವರಿಗೆ ಸೇರಿದ ಜೀಪು ಮನೆ ಎದುರು ನಿಲುಗಡೆ ಮಾಡಿದ ಸಂದರ್ಭ ಕಾಡಾನೆ ದಾಳಿ ಮಾಡಿ ಅಲ್ಪಪ್ರಮಾಣದಲ್ಲಿ ಹಾನಿಪಡಿಸಿದೆ. ಜೊತೆಗೆ ಗಿಡಗಳನ್ನು ತುಳಿದು ನಾಡಪಡಿಸಿದೆ. ತೋಟಕ್ಕೆ ಲಗ್ಗೆ ಇಟ್ಟ ಆನೆ ಕಾಫಿ, ಅಡಿಕೆ, ತೆಂಗು ಬಾಳೆ ಗಿಡಗಳನ್ನು ನಾಶಪಡಿಸಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮಸ್ಥರಾದ ನೆಲ್ಲಮಕ್ಕಡ ವಿವೇಕ್, ಬೆಳಿಯಂಡ್ರ ಕೃಷ್ಣಪ್ಪ, ರಾಮಯ್ಯ ಹಾಗೂ ಮತ್ತಿತರರ ತೋಟಕ್ಕೆ ಕಾಡಾನೆ ನಿರಂತರ ದಾಳಿ ನಡೆಸುತ್ತಿದ್ದು ಫಸಲು ಬರಿತ ಗಿಡಗಳನ್ನು ತುಳಿದು ನಾಶಪಡಿಸುತ್ತಿದೆ. ಕೂಡಲೇ ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ತೋಟಕ್ಕೆ ನುಸುಳದ ರೀತಿಯಲ್ಲಿ ಕಾಡಿಗಟ್ಟಬೇಕು.ಇಲ್ಲವೇ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆAದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಈ ಭಾಗದಲ್ಲಿ ಬೀಡುಬಿಟ್ಟ ಕಾಡಾನೆಯನ್ನು ಸೆರೆ ಹಿಡಿಯಲು ಅನುಮತಿ ದೊರೆತಿದ್ದು ಅದರಲ್ಲಿ ಒಂದು ಆನೆಯನ್ನು ಮಾತ್ರ ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ. ಮತ್ತೊಂದು ಆನೆ ಕಾರ್ಯಾಚರಣೆ ವೇಳೆ ಮೃತಪಟ್ಟಿತ್ತು.
ಅರಣ್ಯ ಇಲಾಖೆ ಕೂಡಲೇ ಅನುಮತಿ ಪಡೆದು ಸೆರೆ ಹಿಡಿಯಲು ಬಾಕಿ ಇರುವ ಆನೆಯನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು, ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.