ಶನಿವಾರಸಂತೆ, ಜು. ೨: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು ಮುಂಜಾನೆ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ವ್ಯಾಪಾರ ಬಿರುಸಿನಿಂದ ನಡೆದಿತ್ತು. ಬಿಡುವು ನೀಡುತ್ತಾ ಆಗಾಗ್ಗೆ ಸುರಿಯುತ್ತಿದ್ದ ತುಂತುರು ಮಳೆಯಲ್ಲಿ ಬೆಳಿಗ್ಗೆ ೩-೩೦ ರಿಂದಲೇ ಹೋಬಳಿ ವ್ಯಾಪ್ತಿಯ ರೈತರು ತಾವು ಬೆಳೆದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಬೆಳೆಯನ್ನು ವಿವಿಧ ವಾಹನಗಳಲ್ಲಿ ಮಾರುಕಟ್ಟೆಗೆ ತಂದು ಸುಂಕ ತೆತ್ತು ಮಾರಾಟ ಆರಂಭಿಸಿದ್ದರು. ಉತ್ತಮ ದರ ದೊರೆತು ರೈತರ ಮೊಗದಲ್ಲಿ ಮಂದಹಾಸ ಮಿನುಗಿತ್ತು. ೧೦ ಗಂಟೆಗೆಲ್ಲ ವ್ಯಾಪಾರ ಮುಗಿಸಿದ ವ್ಯಾಪಾರಿಗಳು ರವಾನೆ ಕಾಯಕದಲ್ಲಿ ತೊಡಗಿಸಿಕೊಂಡರು.
ಶುAಠಿ ಹಾಗೂ ಹಸಿರು ಮೆಣಸಿನಕಾಯಿ ಬೆಳೆ ಕೊಯ್ಲಿನ ಅವಧಿ ಮುಕ್ತಾಯ ಹಂತ ತಲುಪಿದ್ದು ಮಳೆಯನ್ನು ಅವಲಂಬಿಸಿದ್ದು ಈ ವಾರದ ಸಂತೆಯಲ್ಲಿ ರೈತರು ಮಾರುಕಟ್ಟೆಗೆ ೧೫೦ ಚೀಲ ಶುಂಠಿ ಹಾಗೂ ೬ ಲೋಡ್
ಹಸಿರು ಮೆಣಸಿನಕಾಯಿ ತಂದಿದ್ದರು. ೨ ವರ್ಷಕ್ಕೊಮ್ಮೆ ಕೀಳುವ ತೋಟದ ಶುಂಠಿ ೧ ಕೆ.ಜಿ.ಗೆ ರೂ.೯೦-೯೫ ಹಾಗೂ ಗದ್ದೆ ಶುಂಠಿ ೬೦ ಕೆ.ಜಿ. ತುಂಬಿದ ೧ ಚೀಲಕ್ಕೆ ರೂ.೭,೦೦೦-೮,೦೦೦ ದರ ನೀಡಿ ವ್ಯಾಪಾರಿಗಳು ಖರೀದಿಸಿದರು.
ಹಸಿರುಮೆಣಸಿನ ಕಾಯಿ ಮೈಲಾರಿ ತಳಿ ೧ ಕೆ.ಜಿ.ಗೆ ರೂ.೯೦, ಉಲ್ಕಾ ರೂ.೬೦ ಹಾಗೂ ಬಂಗಾರಮ್ಮ ರೂ.೫೦-೫೫ ದರಕ್ಕೆ ಮಾರಾಟ ಮಾಡಿದ ರೈತರು ಅಷ್ಟಕ್ಕೆ ತೃಪ್ತಿ ಹೊಂದಿ ತೆರಳುತ್ತಿದ್ದರು.ಮೆಣಸಿನಕಾಯಿ ಶುದ್ಧವಾಗಿದ್ದರೇ ಮಾತ್ರ ವ್ಯಾಪಾರಿಗಳು ಖರೀದಿಸುತ್ತಾರೆ.ಚಿಕ್ಕ ಗಾತ್ರದ ಮೈಲಾರಿ ತಳಿಯ ಮೆಣಸಿನಕಾಯಿ ವಾರವಾದರೂ ಕೊಳೆಯದ ಕಾರಣ ಅದಕ್ಕೆ ಬೇಡಿಕೆ ಜಾಸ್ತಿಯಾಗಿದೆ.
ಜಿಟಿಜಿಟಿ ಮಳೆಯಾಗುತ್ತಿದ್ದು ಭತ್ತದ ಬೀಜ ಬಿತ್ತನೆ ಸಾಧ್ಯವಾಗದ ಹಿನ್ನಲೆ ಗದ್ದೆಗಳಲ್ಲಿ ಮೆಣಸಿನಕಾಯಿ ಗಿಡಗಳನ್ನು ಉಳಿಸಿಕೊಂಡಿರುವ ರೈತರು ಸಿಕ್ಕಷ್ಟೇ ದರಕ್ಕೆ ಸಂತೃಪ್ತರಾಗುತ್ತಿದ್ದಾರೆ. ಮಳೆ ಜೋರಾಗಿ ಸುರಿದರೇ ಮೆಣಸಿನಕಾಯಿ ಕರಗಿ ಹೋಗುತ್ತದೆ. ಗಿಡ ಕೊಳೆತು ಹೋಗುತ್ತದೆ. ಶುಂಠಿಗೂ ಕೊಳೆರೋಗ ತಗಲುವ ಭಯವಿದ್ದರೂ ಔಷಧಿ ಸಿಂಪಡಿಸಿ ಜೋಪಾನ ಮಾಡಬಹುದು ಎನ್ನುತ್ತಾರೆ ರೈತರು.
ನಾನು ಕಳೆದ ೨೦ ವರ್ಷಗಳಿಂದ ಶನಿವಾರಸಂತೆಯ ಸಂತೆ ಮಾರುಕಟ್ಟೆಗೆ ವ್ಯಾಪಾರಕ್ಕೆ ಬರುತ್ತಿದ್ದು ಶುಂಠಿ, ಹಸಿರು ಮೆಣಸಿನಕಾಯಿ, ಬಾಳೆಕಾಯಿ, ದಗ್ಗಿಳ್ಳಿಕಾಯಿ, ಕಿತ್ತಳೆ ಖರೀದಿಸಿ ಹೊರ ರಾಜ್ಯಕ್ಕೆ ರವಾನಿಸುತ್ತೇನೆ. ವ್ಯಾಪಾರದಲ್ಲಿ ಅಭಿವೃದ್ಧಿ ಅಗಿದೆ. ಆದರೆ, ಸಂತೆ ಮಾರುಕಟ್ಟೆ ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ ಶೌಚಾಲಯವಿಲ್ಲ. ಕುಡಿಯುವ ನೀರಿಲ್ಲ.ವಿದ್ಯುತ್ ಇಲ್ಲ.ರಸ್ತೆಗಳು ಸರಿಯಿಲ್ಲ. ವ್ಯವಸ್ಥೆ ಹದಗೆಟ್ಟಿದ್ದರೂ ಗ್ರಾಮ ಪಂಚಾಯಿತಿ ದುರಸ್ತಿ ಮಾಡಿಸುತ್ತಿಲ್ಲ. ಸಂತೆ ಸುಂಕ ರೂ.೭.೯ ಲಕ್ಷಕ್ಕೆ ಹರಾಜಾಗಿದ್ದು ಉತ್ತಮ ಆದಾಯ ಗಳಿಸುತ್ತಿರುವ ಗ್ರಾಮ ಪಂಚಾಯಿತಿ ಮಾರುಕಟ್ಟೆ ದುರಸ್ತಿ ಬಗ್ಗೆ ದಿವ್ಯ ನಿರ್ಲಕ್ಷö್ಯ ತಾಳಿದೆ ಎಂದು ಯಸಳೂರು ವ್ಯಾಪಾರಿ ಬಾಬಣ್ಣ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
- ಶ. ಗ. ನಯನತಾರ