ಶ್ರೀಮಂಗಲ, ಜು. ೨: ಚುನಾವಣೆ ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದಾಗ ಅದನ್ನು ಜನರು ಗುರುತಿಸುತ್ತಾರೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಬಿರುನಾಣಿ ಮರೆನಾಡ್ ಕೊಡವ ಸಮಾಜದಲ್ಲಿ ಬಿರುನಾಣಿ ವಲಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಅಭಿನಂದನಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಜನ ಬದಲಾವಣೆ ಮತ್ತು ಪರ್ಯಾಯ ನಾಯಕತ್ವವನ್ನು ಬಯಸಿದ್ದರು. ನಾನು ಮತ್ತು ಪಕ್ಷ ಸಂಕಷ್ಟದಲ್ಲಿದ್ದ ಸಮಯದಲ್ಲಿ ಬಹಳಷ್ಟು ಜನರು ಸಹಾಯ ಮಾಡಿದ್ದಾರೆ. ರಾಜಕಾರಣವು ಕುಟುಂಬ ಹಾಗೂ ಸಮಾಜವನ್ನು ವಿಭಜಿಸುತ್ತದೆ. ಇದಕ್ಕೆ ಹೊರತಾದ ರಾಜಕೀಯ ನಾವು ಮಾಡಬೇಕಾಗಿದೆ. ಚುನಾವಣೆ ಸಮಯದಲ್ಲಿ ಕಂಡAತಹ ಜನರ ಮಾನಸಿಕತೆ ಬದಲಾಗಬೇಕು. ಮನಸನ್ನು ಪರಿವರ್ತನೆಗೊಳಿಸಬೇಕಾಗಿದೆ ಎಂದರು.

ಜಿಲ್ಲೆಯ ಪ್ರತಿಭೆಗಗಳಿಗೆ, ಯುವ ಸಮುದಾಯಕ್ಕೆ ಅವಕಾಶ ಸಿಗಬೇಕು, ಈ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವ ಕಾರ್ಯ, ಜನರ ಚಿಂತನೆ ಬದಲಾಯಿಸಿ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮುಕ್ತವಾದ ವಾತಾ ವರಣವನ್ನು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಉಪಾಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ಅವರು, ಪಕ್ಷದಲ್ಲಿ ೨೦ ವರ್ಷಗಳಿಂದ ಶಾಸಕರಿಲ್ಲದಿ ದ್ದರೂ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ಕಾರ್ಯಕರ್ತರು ಉಳಿದಿದ್ದಾರೆ, ನಿರಂತರ ಸೋಲಿನಿಂದ ಪಕ್ಷದಲ್ಲಿ ಕಾರ್ಯಕರ್ತರು, ಬೆಂಬಲಿಗರು, ಮತದಾರರು ನಿರಾಸೆ ಅನುಭವಿಸುತ್ತಾ ಬಂದಿದ್ದಾರೆ. ಚುನಾವಣಾ ಪೂರ್ವ ದಲ್ಲಿ ಸ್ಥಳೀಯ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾಗಿದೆ. ೨ ದಶಕಗಳಿಂದ ನೆನೆಗುದಿಗೆ ಬಿದ್ದಿ ರುವ ಕೂಟಿಯಾಲ ಸಂಪರ್ಕ ರಸ್ತೆ ಸಂಪರ್ಕ ಮಾಡಬೇಕಾಗಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿ, ಕಿರು ನೀರಾವರಿ ಯೋಜನೆ, ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಗೆ ವಿದ್ಯುತ್ ಸರಬರಾಜು ಉಪಕೇಂದ್ರ ಸ್ಥಾಪನೆಗೆ ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಬದಲಾಯಿಸಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ದೊರೆತಿದೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭಾ ಚುನಾವಣೆಯಲ್ಲಿ ಬರುವ ಸವಾಲು ಎದುರಿಸಿ ಗೆಲುವು ಸಾಧಿಸಲು ಕಾರ್ಯಕರ್ತರು ಮುಂದಾಗಬೇಕು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುತ್ತದೆ ಎಂದರು.

ಸಮಾವೇಶಕ್ಕೂ ಮೊದಲು ಬಿರುನಾಣಿ ಪಟ್ಟಣದ ಮುಖ್ಯ ಬೀದಿಯಲ್ಲಿ ಒಡ್ಡೋಲಗದೊಂದಿಗೆ ನೂತನ ಶಾಸಕರೊಂದಿಗೆ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಯಿತು. ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಕೋಳೆರ ಭಾರತಿ, ತಾ.ಪಂ. ಮಾಜಿ ಸದಸ್ಯರುಗಳಾದ ಬೊಳ್ಳೆರ ಪೊನ್ನಪ್ಪ, ಪಲ್ವಿನ್ ಪೂಣಚ್ಚ, ಗ್ರಾ.ಪಂ.ಮಾಜಿ ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ ಹಾಜರಿದ್ದರು.