ಮಡಿಕೇರಿ, ಜೂ. ೩೦: ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದಾದ ‘ಅಮೃತ ೨.೦’ ಯೋಜನೆ ಅಡಿಯಲ್ಲಿ ಮಡಿಕೇರಿಯಲ್ಲಿ ನಲ್ಲಿ ನೀರು ಸಂಪರ್ಕ ಇಲ್ಲದ ಮನೆಗಳಿಗೆ ನೀರು ಒದಗಿಸುವ ಕಾರ್ಯಕ್ಕೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯ್ ಈ ಬಗ್ಗೆ ಮಾಹಿತಿ ನೀಡಿ, ನಗರದಲ್ಲಿ ೭,೭೬೨ ಮನೆಗಳಿದ್ದು, ೧,೪೬೨ ಮನೆಗಳಿಗೆ ನೀರಿನ ಸಂಪರ್ಕವಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮಂಡಳಿಗೆ ಯೋಜನಾ ವರದಿಯನ್ನು ಕಳುಹಿಸಲಾಗಿದ್ದು, ಅನುದಾನವೂ ಬರಲಿದೆ. ಇದಕ್ಕೆ ನಗರಸಭೆಯ ಅನುಮೋದನೆ ಬೇಕಿದೆ ಎಂದು ಮನವಿ ಮಾಡಿದರು.

೪ ಜಲಮೂಲಗಳಿಂದ ನೀರು ಒದಗಿಸುವ ನಿಟ್ಟಿನಲ್ಲಿ ೪ ವಿಭಾಗಗಳನ್ನಾಗಿ ಮಾಡಲಾಗಿದೆ. ಈ ಯೋಜನೆಗೆ ಒಟ್ಟು ರೂ. ೫೮ ಕೋಟಿಯ ಅನುದಾನ ಬೇಕಿದೆ. ಆದರೆ, ಮೊದಲ ಹಂತದಲ್ಲಿ ದೊರೆತ ಹಣದಲ್ಲಿ ನಲ್ಲಿ ನೀರು ಒದಗಿಸಲಾಗುವುದು ಎಂದು ಅಜಯ್ ವಿವರಿಸಿದರು. ಇದಕ್ಕೆ ಸದಸ್ಯರು ಯುಜಿಡಿ ಮಾದರಿಯಲ್ಲಿ ಕೆಲಸವಾಗಬಾರದು. ರಸ್ತೆಗಳನ್ನು ಅಗೆದು ಬಳಿಕ ಅದನ್ನು ಮುಚ್ಚದೆ ಸಮಸ್ಯೆ ಮಾಡಬಾರದು ಎಂದು ತಾಕೀತು ಮಾಡಿದ್ದಲ್ಲದೆ ಒಂದು ವರ್ಷಗಳ ಕಾಲ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.

ಮಡಿಕೇರಿ ಶಾಸಕ ಮಂಥರ್ ಗೌಡ ಮಾತನಾಡಿ, ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಬೇಕಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಮಳೆಕೊಯ್ಲಿಗೆ ಯೋಜನೆ ರೂಪಿಸಬೇಕು. ಮನೆ ನಿರ್ಮಿಸುವವರು ಸಂಪ್ ನಿರ್ಮಿಸಿದರೆ ನೀರು ಸಂಗ್ರಹಕ್ಕೆ ಅವಕಾಶವಾಗುತ್ತದೆ. ನಗರಸಭೆ ಈ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡಬೇಕೆಂದು ಸಲಹೆ ನೀಡಿದರು.

೭ ಕೆರೆಗಳ ಅಭಿವೃದ್ಧಿ - ಮಂಥರ್

ನಗರದ ಪ್ರಮುಖ ಜಲಮೂಲಗಳಾಗಿರುವ ೭ ಕೆರೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಭರವಸೆ ನೀಡಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು ರೂ. ೬ ಕೋಟಿ ಅನುದಾನದ ಲಭ್ಯತೆ ಇದೆ. ಇದನ್ನು ಬಳಸಿಕೊಂಡು ನಗರದ ಅಭಿವೃದ್ಧಿಗೆ ಮುಂದಾಗಬೇಕಾಗಿದೆ. ಈ ಹಣದಲ್ಲಿ ನೀರು ಪೂರೈಸುವ ಉದ್ದೇಶದಿಂದ ರೂ. ೪೫ ಲಕ್ಷ ವೆಚ್ಚದಲ್ಲಿ ೩೦೦ ಹೆಚ್.ಪಿ. ಮೋಟಾರ್ ಖರೀದಿಸಲು ಸೂಚನೆ ನೀಡಿದ್ದೇನೆ. ರೋಷನಾರ ಕೆರೆಯನ್ನು ಅಭಿವೃದ್ಧಿಗೊಳಿಸಿ ಉಳಿಕೆ ಜಾಗವನ್ನು ಪಾರ್ಕ್ ಆಗಿ ಪರಿವರ್ತನೆ ಮಾಡಲಾಗುವುದು. ಕೊಡಗು ಉಸ್ತುವಾರಿ ಸಚಿವರು ಸಣ್ಣನೀರಾವರಿ ಸಚಿವರಾಗಿರುವ ಹಿನ್ನೆಲೆ ಈಗಾಗಲೇ ಕೆರೆ ಅಭಿವೃದ್ಧಿ ಸಂಬAಧ ಗಮನಸೆಳೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕಸ ವಿಲೇವಾರಿ ಘಟಕಕ್ಕೆ ಯೋಜನಾ ವರದಿ

ನಗರದ ಹೊರವಲಯದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ರೂ. ೭ ಕೋಟಿಗೆ ಸಂಪೂರ್ಣ ಯೋಜನಾ ವರದಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಪೌರಾಯುಕ್ತ ವಿಜಯ ಮಾಹಿತಿ ನೀಡಿದರು.

ಆರೋಗ್ಯಾಧಿಕಾರಿ ಸೌಮ್ಯ ಮಾತನಾಡಿ, ೬ ಟ್ರಾö್ಯಕ್ಟರ್, ೬ ಗೂಡ್ಸ್ ಆಟೋಗಳ ಮೂಲಕ ಕಸವಿಲೇವಾರಿ ಮಾಡಲಾಗುತ್ತಿದೆ. ೧೭ ಖಾಯಂ ಪೌರಕಾರ್ಮಿಕರು, ೨೦ ನೇರನೇಮಕಾತಿ, ೨೮ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಸೂಚಿಸಿದ ಮಾರ್ಗದಲ್ಲಿ ನಿತ್ಯ ಕಸ ಸಂಗ್ರಹಿಸುತ್ತಿದ್ದಾರೆ. ೧೭ ಸಾವಿರ ಟನ್ ಕಸ ವಿಲೇವಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಪ್ರಕ್ರಿಯೆ ಆಗಬೇಕಾಗಿದೆ ಎಂದು ತಿಳಿಸಿದರು.

ಈ ಸಂಬAಧ ಮಾತನಾಡಿದ ಸದಸ್ಯ ರಾಜೇಶ್ ಯಲ್ಲಪ್ಪ, ವಾಹನ ಕೆಟ್ಟು ಹೋದರೆ ಆ ಮಾರ್ಗಕ್ಕೆ ಕಸ ವಿಲೇವಾರಿ ವಾಹನ ತೆರಳುವುದಿಲ್ಲ. ಇದರಿಂದ ಸಮಸ್ಯೆ ಆಗುತ್ತದೆ. (ಮೊದಲ ಪುಟದಿಂದ) ಕಾಲಕಾಲಕ್ಕೆ ವಾಹನಗಳ ನಿರ್ವಹಣೆ ಸರಿಯಾಗಿ ಮಾಡಬೇಕೆಂದರು.

ಶಾಸಕ ಮಂಥರ್ ಮಾತನಾಡಿ, ಭವಿಷ್ಯದ ದೃಷ್ಟಿಯಿಂದ ೨ ಟಿಪ್ಪರ್ ವಾಹನ ಖರೀದಿಸಿ ನಗರದ ಹೊರವಲಯದಲ್ಲಿ ಕಸ ವಿಂಗಡಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ೪ನೇ ಹಂತದ ರೂ. ೩.೫೦ ಕೋಟಿ ಹಣ ಬಿಡುಗಡೆಗೆ ಬಾಕಿ ಉಳಿದ ಬಗ್ಗೆ ಸದಸ್ಯ ಮನ್ಸೂರ್ ಅಲಿ ಗಮನ ಸೆಳೆದರು. ಸದಸ್ಯ ಅರುಣ್ ಶೆಟ್ಟಿ, ನಗರದ ಕೆಲವೆಡೆ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಕೂಡಿದೆ. ಅರೆಬರೆ ಕಾಮಗಾರಿಯೂ ನಡೆದಿದೆ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಸರ್ವೆ ನಡೆಸಲು ನಿರ್ಧಾರ

‘ಕೆಎಂಎಫ್-೨೪’ ಅಡಿಯಲ್ಲಿ ಆಸ್ತಿ ಮಾಲೀಕರ ಸ್ವತ್ತಿನ ದಾಖಲಾತಿ ಪಡೆಯುವ ಮಾಡುತ್ತಿರುವ ಸರ್ವೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಆಶ್ರಯ ಮನೆ ಇದ್ದವರಿಗೆ ಹಕ್ಕುಪತ್ರ ದೊರೆತಿದೆ. ಆದರೆ, ನಮೂನೆ-೩ ದೊರೆತ್ತಿಲ್ಲ. ಇದರಿಂದ ಸಮಸ್ಯೆ ಆಗಿದೆ ಎಂದು ಸದಸ್ಯ ಕೆ.ಎಸ್. ರಮೇಶ್ ಹಾಗೂ ಬಷೀರ್ ಪ್ರಸ್ತಾಪಿಸಿದರು. ಈ ಸಂಬAಧ ನಗರದ ೨೩ ವಾರ್ಡ್ಗಳಲ್ಲಿ ಸರ್ವೆ ಕಾರ್ಯ ನಡೆಸಿ ಜಾಗದ ಬಗ್ಗೆ ಮಾಹಿತಿ ಪಡೆಯಲು ಶಾಸಕ ಮಂಥರ್ ನಿರ್ದೇಶಿಸಿದರು. ಇದಕ್ಕೆ ಒಪ್ಪಿಗೆ ನೀಡಿ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಬೀದಿ ದೀಪ ಅಳವಡಿಕೆಗೆ ಟೆಂಡರ್ ಮಾಡಿ ಕಾರ್ಯಾದೇಶ ನೀಡಿದ್ದರೂ ಕೂಡ ಬಲ್ಬ್ ಅಳವಡಿಸದ ಬಗ್ಗೆ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು. ಇದಕ್ಕೆ ಸಂಬAಧಪಟ್ಟ ಅಧಿಕಾರಿ ಮಾತನಾಡಿ, ನೀತಿ ಸಂಹಿತೆ ಇದ್ದ ಹಿನ್ನೆಲೆ ಅಳವಡಿಸಿಲ್ಲ ಎಂದು ಸಬೂಬು ನೀಡಿದರು.

ನೀತಿ ಸಂಹಿತೆ ಜಾರಿಯಾಗುತ್ತೆ ಎಂದು ತಿಳಿದಿದ್ದರೂ ಕೆಲಸ ತಡವಾಗಲು ಕಾರಣವೇನು? ಎಂದು ಪ್ರಶ್ನಿಸಿದರು. ಸದಸ್ಯರು ಮಧ್ಯ ಪ್ರವೇಶಿಸಿ ಕಾರ್ಯಾದೇಶ ನೀಡಿದ ಕೆಲಸ ಮಾಡಲು ಯಾವುದೇ ತೊಡಕಿಲ್ಲ. ಬೇಕೆಂದು ಈ ರೀತಿ ವಿಳಂಬ ಮಾಡಲಾಗಿದೆ. ಮರುಟೆಂಡರ್ ಮಾಡಿ ಬೇರೆಯವರಿಗೆ ಕೆಲಸ ನೀಡುವಂತೆ ಒತ್ತಾಯಿಸಿದರು. ವಾರದೊಳಗೆ ಟೆಂಡರ್ ಆಹ್ವಾನಿಸಿ, ಶೀಘ್ರ ಕೆಲಸ ಆರಂಭಿಸುವAತೆ ನಿರ್ಧರಿಸಲಾಯಿತು.

ರಾಜಕಾಲುವೆ ಹೂಳೆತ್ತುವ, ಶುಚಿತ್ವದ ಕೆಲಸಕ್ಕೆ ಸರಿಯಾಗಿ ನಡೆದಿಲ್ಲ. ನೀರು ದುರ್ನಾತ ಬರುತ್ತಿದೆ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ, ಮಳೆಗಾಲದಲ್ಲಿ ನೀರಿನ ಬಣ್ಣ ಬದಲಾಗುತ್ತದೆ. ಇದಕ್ಕೆ ರಾಸಯನಿಕ ಹಾಕಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಉತ್ತರಿಸಿದರು. ಅಧ್ಯಕ್ಷೆ ಅನಿತಾ ಮಾತನಾಡಿ, ಟ್ಯಾಂಕ್‌ನಲ್ಲಿ ಸಮಸ್ಯೆ ಇರಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಸೀಮಿತ ಗುತ್ತಿಗೆದಾರರಿಗೆ ಕೆಲಸ

ಎನ್.ಡಿ.ಆರ್.ಎಫ್. ಅಡಿಯಲ್ಲಿ ಮಾಡಿದ ಕೆಲಸಗಳು ಸದಸ್ಯರ ಗಮನಕ್ಕೆ ಬಂದಿಲ್ಲ. ನೇರವಾಗಿ ‘ಕೊಟೇಷನ್’ ರೂಪದಲ್ಲಿ ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸದಸ್ಯ ರಾಜೇಶ್ ಯಲ್ಲಪ್ಪ ಅನುಮಾನ ವ್ಯಕ್ತಪಡಿಸಿದರು. ಸೀಮಿತ ಗುತ್ತಿಗೆದಾರರಿಗೆ ಕೆಲಸ ನೀಡಲಾಗುತ್ತಿದೆ. ಇದರಿಂದ ಬೇರೆ ಗುತ್ತಿಗೆದಾರರು ಅವಕಾಶ ವಂಚಿತರಾಗುತ್ತಿದ್ದಾರೆ. ಜೊತೆಗೆ ಗುತ್ತಿಗೆದಾರರಿಗೆ ಹಣ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಇದರಿಂದ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಗಮನಸೆಳೆದರು.

ಪೌರಾಯುಕ್ತ ವಿಜಯ ಮಾತನಾಡಿ, ತಾನು ಅಧಿಕಾರ ವಹಿಸಿಕೊಂಡ ನಂತರ ಒಂದು ಕೆಲಸವೂ ‘ಕೊಟೇಷನ್’ ರೂಪದಲ್ಲಿ ಮಾಡಿಲ್ಲ ಎಂದರು. ಇಂಜಿನಿಯರ್ ಶಮಂತ್ ಮಾತನಾಡಿ, ಎನ್.ಡಿ.ಆರ್.ಎಫ್. ನಡಿ ೧೨ ಲಕ್ಷ ಅನುದಾನ ಬಂದಿದೆ. ಅದರಲ್ಲಿ ೪೧ ಕೆಲಸಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೆಲಸ ಮುಗಿದ ಕಾಮಗಾರಿಗಳಿಗೆ ಬಿಲ್ ನೀಡಲು ಸಭೆ ಅನುಮೋದನೆ ನೀಡಬೇಕೆಂದು ರಾಜೇಶ್ ಪಟ್ಟುಹಿಡಿದರು. ಅಧ್ಯಕ್ಷೆ ಅನಿತಾ, ಸ್ಥಳ ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಪ್ರಾರಂಭದಲ್ಲಿ ವಾಗ್ವಾದ

ಶಾಸಕರಿಗೆ ಸನ್ಮಾನ ಮುಗಿದ ನಂತರ ಕೆಲ ಸದಸ್ಯರು ವಿವಿಧ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿ ‘ಅಜೆಂಡಾ’ ಪ್ರಕಾರ ಸಭೆ ನಡೆಸಬೇಕೆಂದು ಹೇಳಿದರು. ಈ ವೇಳೆ ವಾಗ್ವಾದ ನಡೆಯಿತು. ಅಜೆಂಡಾ ರೂಪಿಸುವಾಗ ಸದಸ್ಯರ ಗಮನಕ್ಕೆ ತರಬೇಕೆಂದು ರಾಜೇಶ್ ಯಲ್ಲಪ್ಪ ಹೇಳಿದರೆ, ಸಭೆಯಿಂದ ನಾವು ಬೇಗ ಹೋಗಬೇಕೆಂದೆ ಶುಕ್ರವಾರ ಸಭೆ ಆಯೋಜಿಸಲಾಗುತ್ತದೆ ಎಂದು ಎಸ್.ಡಿ.ಪಿ.ಐ. ಸದಸ್ಯ ಮನ್ಸೂರ್ ಅಲಿ ದೂರಿದರು.

ಇದೇ ಸಂದರ್ಭ ಪತ್ರಕರ್ತೆಯೋರ್ವರನ್ನು ಬಿಜೆಪಿ ಪಕ್ಷದ ಆಂತರಿಕ ವೇದಿಕೆಯಲ್ಲಿ ನಗರಸಭೆ ಸದಸ್ಯರೊಬ್ಬರು ಏಕವಚನದಿಂದ ಅವಹೇಳನ ಮಾಡಿದ ಬಗ್ಗೆ ಸದಸ್ಯ ಬಷೀರ್ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಇತರ ವಿಷಯದಡಿ ಚರ್ಚಿಸಬೇಕೆಂದು ಇತರ ಸದಸ್ಯರು ಹೇಳಿದ ಸಂದರ್ಭ ವಾಗ್ವಾದ ನಡೆಯಿತು. ಸಭೆಯಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.