ಚೆಯ್ಯಂಡಾಣೆ, ಜು. ೧: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಮುಖ್ಯ ಶಿಕ್ಷಕಿ ಮೀನಾ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಮಸ್ಥರು, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಕಿರು ಕಾಣಿಕೆ ನೀಡಿ ಬೀಳ್ಕೊಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ನಳಿನಿ, ಶಾಲೆಯನ್ನು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಾಡುವಂತಹ ಕೆಲಸ ಸ್ಮರಣೀಯ. ನಂತರ ಅವರು ಬಿಟ್ಟು ಹೋಗುವುದು ಬೇಸರದ ಸಂಗತಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು ಮಾತನಾಡಿ, ಶಿಕ್ಷಕಿ ಮೀನಾ ಅವರೊಂದಿಗಿನ ಒಡನಾಟವನ್ನು ನೆನೆದರು. ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಸಿಆರ್‌ಪಿ ಉಷಾ ಮಾತನಾಡಿ, ಮೀನಾ ಅವರ ಸೇವೆಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಮೀನಾ ಅವರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಕಷ್ಟ ಸುಖಗಳನ್ನು ಮರೆತು ಯಾವುದೇ ಚಿಂತೆ ಇಲ್ಲದೆ ಸಮಯವನ್ನು ಕಳೆಯುತ್ತಿದ್ದೆ, ಇನ್ನು ಮನೆಯಲ್ಲಿ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳುವುದು ತಿಳಿಯುತ್ತಿಲ್ಲವೆಂದು ನಿವೃತ್ತಿ ಜೀವನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಆಡಳಿತ ಮಂಡಳಿ, ಗ್ರಾಮಸ್ಥರು, ಪೋಷಕರು ವಿದ್ಯಾರ್ಥಿಗಳು ಹಾಜರಿದ್ದು ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ರತ್ನ ವಹಿಸಿದರು.

ಈ ಸಂದರ್ಭ ಶಿಕ್ಷಕಿಯರುಗಳಾದ ಸರಸ್ವತಿ, ಮಂಜುಳಾ, ರೇಖಾ, ವೀಣಾ, ಕಲ್ಪನಾ, ನಿಶಾ, ಆರ್ಶಿಯ, ದಮಯಂತಿ ಹಾಗೂ ಪೋಷಕರು, ಸ್ಥಳೀಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಲೀಲಾವತಿ, ಸ್ವಾಗತವನ್ನು ನೂತನ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ನಡೆಸಿದರೆ ನಿರೂಪಣೆಯನ್ನು ಹಾಗೂ ವಂದನೆಯನ್ನು ಶಿಕ್ಷಕಿ ಜಯಪ್ರದ ನಿರ್ವಹಿಸಿದರು .