ಸಿದ್ದಾಪುರ, ಜೂ. ೩೦ : ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆೆ ನಡೆಸಿರುವುದಲ್ಲದೆ ಮನೆಯ ಅಂಗಳಕ್ಕೆ ನುಗ್ಗಿ ಹೂ ಗಿಡಗಳನ್ನು ಹಾನಿಗೊಳಿಸಿದ ಘಟನೆ ಅಮ್ಮತ್ತಿ ಸಮೀಪದ ಕಣ್ಣಂಗಾಲದಲ್ಲಿ ನಡೆದಿದೆ.
ಕಣ್ಣಂಗಾಲ ಗ್ರಾಮದ ಎಂ.ಸಿ. ಮುದ್ದಯ್ಯ ಎಂಬುವವರ ಕಾಫಿ ತೋಟದಲ್ಲಿ ಕಳೆದೆರಡು ದಿನಗಳಿಂದ ೫ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು ಕಾಫಿ ತೋಟದಲ್ಲಿ ಕಾಫಿ ಗಿಡಗಳು ಸೇರಿದಂತೆ ತೆಂಗಿನಮರಗಳನ್ನು ಎಳೆದು ಹಾಕಿ ಬೆಳೆ ನಾಶಪಡಿಸಿವೆ. ಅಲ್ಲದೆ ಮನೆಯ ಅಂಗಳಕ್ಕೆ ನುಗ್ಗಿದ ಕಾಡಾನೆ ಮನೆಯ ಬಳಿ ಇದ್ದ ಹೂ ಗಿಡಗಳ ಕುಂಡ ಹಾಳು ಮಾಡಿವೆ. ರಾತ್ರಿ ಸಮಯದಲ್ಲಿ ಕಾಡಾನೆಗಳು ಮನೆಯ ಬಳಿ ಬಂದು ಘೀಳಿಡುತ್ತಿದ್ದು ಪ್ರತಿನಿತ್ಯ ಜೀವಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುದ್ದಯ್ಯ ಅಳಲು ತೋಡಿಕೊಂಡಿದ್ದಾರೆ. ತೋಟ ಕೆಲಸಕ್ಕೆ ಕಾರ್ಮಿಕರು ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.
ಕಳೆದ ಭಾನುವಾರದಂದು ಕಣ್ಣಂಗಾಲ ಗ್ರಾಮದಲ್ಲಿ ಸಲಗವೊಂದನ್ನು ಸೆರೆ ಹಿಡಿದ ಬಳಿಕ ಗುಂಪುಗಳಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಕಾಫಿ ತೋಟದೊಳಗೆ ಸುತ್ತಾಡುತ್ತಿರುವುದು ಕಂಡು ಬರುತ್ತಿದ್ದು ಕಾಡಾನೆ ಹಾವಳಿಯಿಂದ ವ್ಯಾಪ್ತಿಯಲ್ಲಿ ಬದುಕುವುದು ದುಸ್ತರವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕರಡಿಗೋಡುವಿನಲ್ಲಿ ಹಾವಳಿ : ಸಿದ್ದಾಪುರದ ಕರಡಿಗೋಡು ಗ್ರಾಮದ ಕಂಬೀರAಡ ಕುಟುಂಬಸ್ಥರ ಕಾಫಿ ತೋಟಗಳಲ್ಲಿ ಹಾಗೂ ಹೇರೂರು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಸಮೀಪದ ಕೆ.ಪಿ. ದೇವಯ್ಯ ಎಂಬುವವರ ತೋಟದಲ್ಲಿ ಪ್ರತಿನಿತ್ಯ ಐದು ಆನೆಗಳ ಹಿಂಡು ಬೀಡುಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆ ನಾಶ ಉಂಟಾಗಿದೆ ಎಂದು ದೇವಯ್ಯ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.