ರಾಜ್ಯದಲ್ಲಿ ಇಷ್ಟರಲ್ಲಿಯೇ ಮುಂಗಾರು ಬಿರುಸು ಪಡೆದುಕೊಳ್ಳ ಬೇಕಾಗಿತ್ತು. ಆದರೆ ಬೇಸಿಗೆಯಿಂದಲೇ ಸರಿಯಾಗಿ ಮಳೆ ಸುರಿಯದ ಕಾರಣದಿಂದಾಗಿ ಬರದ ಛಾಯೆ ಎದುರಾಗಿದೆ. ತುಂಬಿ ತುಳುಕುತ್ತಿದ್ದ ಕೆರೆಕಟ್ಟೆಗಳು, ಜಲಾಶಯಗಳು ಬತ್ತಿವೆ. ನದಿಯಲ್ಲಿ ನೀರು ಇಲ್ಲದಂತಾಗಿದೆ. ಇದೆಲ್ಲವೂ ಜನರನ್ನು ಭಯಪಡುವಂತೆ ಮಾಡಿದೆ.
ಕಳೆದ ಐದಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಏಕೆಂದರೆ ಮುಂಗಾರು ಉತ್ತಮವಾಗಿತ್ತು. ಅಷ್ಟೇ ಅಲ್ಲದೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜಲಾಶಯಗಳು ಸೇರಿದಂತೆ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದವು. ಇನ್ನೊಂದೆಡೆ ನವೆಂಬರ್ ತನಕವೂ ಮಳೆ ಸುರಿದಿತ್ತು. ಹೀಗಾಗಿ ರೈತರ ಕೃಷಿಗಾಗಲೀ, ಕುಡಿಯುವುದಕ್ಕಾಗಲೀ ಯಾವುದೇ ಸಮಸ್ಯೆ ಇರಲಿಲ್ಲ. ನೀರಿನ ವಿವಾದಕ್ಕೂ ತೆರೆ ಬಿದ್ದಿತ್ತು.
ಆದರೆ ಈಗ ಮತ್ತೆ ನೀರಿನ ಸುತ್ತಲೂ ಸಮಸ್ಯೆಗಳು ಆರಂಭವಾಗುವ ಎಲ್ಲ ಲಕ್ಷಣಗಳು ಎದುರಾಗಿವೆ. ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆ ಮಳೆ ಸುರಿಯದ ಕಾರಣದಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಯುತ್ತಲೇ ಹೋಯಿತು. ಜೂನ್ ತಿಂಗಳು ಬಂತು ಮುಂಗಾರು ಆರಂಭವಾಗಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದು ರೈತರು ಸೇರಿದಂತೆ ಜನ ನಂಬಿದ್ದರು. ಆದರೆ ಅದೇಕೋ ಗೊತ್ತಿಲ್ಲ ವರುಣ ಮನಸು ಮಾಡಿದಂತೆ ಕಾಣುತ್ತಿಲ್ಲ. ಹೀಗಾಗಿ ಮುಂಗಾರು ದುರ್ಬಲವಾಗಿದ್ದು, ಮುಂದೇನು ? ಎಂಬ ಭಯಕಾಡಲಾರಂಭಿಸಿದೆ.
ಮಳೆ ಸುರಿಯದಿರಲು ವೈಜ್ಞಾನಿಕವಾಗಿ ಹಲವು ಕಾರಣಗಳು ಇಲ್ಲದಿಲ್ಲ. ಆದರೆ ಬಾರದೆ ಇದ್ದಾಗ ನಾವೆಲ್ಲರೂ ಬೇರೆ ದಾರಿ ಕಾಣದೆ ದೇವರ ಮೊರೆ ಹೋಗುವುದು, ವಿವಿಧ ಪೂಜೆ-ಪುನಸ್ಕಾರಗಳನ್ನು ಮಾಡುವುದು ಹಿಂದಿನಿAದಲೂ ನಡೆದು ಬಂದಿದೆ. ಮಳೆ ಬಾರದಿದ್ದಾಗ ಮಳೆಗಾಗಿ ನಮ್ಮ ಪೂರ್ವಜರು ಹಲವು ರೀತಿಯ ಪೂಜಾಕ್ರಮಗಳೊಂದಿಗೆ ಯಜ್ಞ ಗಳನ್ನು ಮಾಡುತ್ತಿದ್ದರು. ಜತೆಗೆ ಕೆಲವೆಡೆ ಮಳೆಗಾಗಿ ವಿವಿಧ ಬಗೆಯ ಮದುವೆಗಳನ್ನು ಮಾಡುತ್ತಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ. ಹಾಗಾದರೆ ಮಳೆಗಾಗಿ ಯಾವುದೆಲ್ಲ ಮದುವೆಗಳನ್ನು ಮಾಡುತ್ತಿದ್ದರು ಎನ್ನುವುದನ್ನು ನೋಡುತ್ತಾ ಹೋದರೆ ಕಪ್ಪೆ, ಕತ್ತೆ, ಅರಳಿ ಬೇವಿಗೆ, ಗಂಡುಮಕ್ಕಳಿಗೆ ಮದುವೆ ಮಾಡುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ. ಇದು ಮೇಲ್ನೋಟಕ್ಕೆ ಮೂಢನಂಬಿಕೆಯAತೆ ಕಂಡು ಬರಬಹುದು. ಆದರೆ ಇದನ್ನು ಜನರು ನಂಬಿಕೆಯಿAದಲೇ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ಮಂಡ್ಯದಲ್ಲಿ ಗಂಡು ಮಕ್ಕಳಿಗೆ ಮದುವೆ ಮಾಡುವ ಮೂಲಕ ಮಳೆಯ ಜಪ ಮಾಡಿದ್ದಾರೆ. ಇದು ಬಹಳ ಸುದ್ದಿಯಾಗಿದೆ. ಕೆಲವರು ಈ ಬಗ್ಗೆ ತಮ್ಮದೇ ಆದ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಆದರೆ ಇದರ ಹಿಂದೆ ಹಳ್ಳಿಗರ ನಂಬಿಕೆ, ಶ್ರದ್ಧೆ ಇದೆ ಎನ್ನುವುದಂತು ಸತ್ಯ. ಇಷ್ಟಕ್ಕೂ ಈ ಮದುವೆ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಿದರೆ, ಇಬ್ಬರು ಗಂಡು ಮಕ್ಕಳಿಗೆ ಹೆಣ್ಣು-ಗಂಡಿನ ವೇಷ ತೊಡಿಸಿ ವಧು-ವರರನ್ನಾಗಿ ಸಿಂಗರಿಸಿ ಅವರಿಗೆ ವಿವಾಹ ಮಾಡಿ ಬೆಳದಿಂಗಳಲ್ಲಿ ಮೆರವಣಿಗೆ ಮಾಡಿ ಮಳೆಗಾಗಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ರಾತ್ರಿಯಿಡೀ ಮಳೆಗಾಗಿ ಹಾಡುಗಳನ್ನು ಹಾಡುತ್ತಾ ವರುಣನನ್ನು ಜಪಿಸುತ್ತಾರೆ.
ಇನ್ನು ಕಪ್ಪೆ ಮದುವೆ ಮಾಡುವ ಸಂಪ್ರದಾಯದಲ್ಲಿ ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಗಂಡು ಕಪ್ಪೆಗೆ ಯುವಕರು ಅಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪ್ಪೆಗೆ ಶೃಂಗಾರ ಮಾಡಿ, ನಂತರ ಮುತ್ತೆöÊದೆಯರು ಕಳಸ ಹೊತ್ತು ಕೊಂಡು ನೀರು ತರುವ ಶಾಸ್ತçಕ್ಕೆ ಮುಂದಾಗುತ್ತಾರೆ. ಇದರ ಜತೆಗೆ ಗಂಡು ಕಪ್ಪೆಗೆ ಯುವಕರು ಹಸೆಮಣೆ ಏರಿಸುವ ಶಾಸ್ತç ಮಾಡುತ್ತಾರೆ.
ಇದಾದ ಬಳಿಕ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ಯು ತ್ತಾರೆ. ಆಗ ಹೆಣ್ಣು ಕಪ್ಪೆಯ ಕಡೆಯವರು ಮನೆ ತುಂಬಿಸಿಕೊಳ್ಳುವ ಶಾಸ್ತçವನ್ನು ಮಾಡುತ್ತಾರೆ. ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೆöÊದೆಯರು ನವ ವಧು-ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬುತ್ತಾರೆ.
ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸುತ್ತಾರೆ. ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮುತ್ತೆöÊದೆಯರು ನೂತನ ವಧುವರರಿಗೆ ಶುಭ ಹಾರೈಸುತ್ತಾರೆ. ಇದಾದ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಅರತಕ್ಷತೆ ನಡೆಸುತ್ತಾರೆ. ಆ ಮೂಲಕ ಮಳೆರಾಯನನ್ನು ಜಪಿಸುತ್ತಾರೆ.
ಕತ್ತೆಗಳಿಗೆ ನಡೆಯುವ ಮದುವೆಯಲ್ಲಿ ಗಂಡು ಹೆಣ್ಣು ಕತ್ತೆಗಳೊಂದಿಗೆ ದೇವಸ್ಥಾನಕ್ಕೆ ತೆರಳುವ ಹಿರಿಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶುಭಲಗ್ನದಲ್ಲಿ ದೇಗುಲದ ಪೂಜಾರಿ ಅರಿಶಿಣದ ಕೊಂಬಿನ ತಾಳಿಯನ್ನು ಗ್ರಾಮದ ವ್ಯಕ್ತಿಯೊಬ್ಬನ ಮೂಲಕ ಕತ್ತೆಗೆ ಕಟ್ಟಿಸಿ ಮದುವೆ ಮಾಡಿಸುತ್ತಾರೆ. ಇದೇ ವೇಳೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ನಂತರ ಎಲ್ಲರೂ ಒಂದೆಡೆ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭ ಪ್ರತಿಮನೆಯಲ್ಲೂ ಮಹಿಳೆಯರು ಕತ್ತೆಗಳಿಗೆ ಆರತಿ ಎತ್ತಿ ಪೂಜೆ ಸಲ್ಲಿಸುತ್ತಾರೆ. ದಾರಿಯುದ್ದಕ್ಕೂ ತಮಟೆ ಬಡಿಯುತ್ತಾ, ಕುಣಿಯುತ್ತಾ ಯುವಕರು ಮಕ್ಕಳು ಮದುವೆಯ ಮೆರವಣಿಗೆಗೆ ಜೀವ ತುಂಬುತ್ತಾರೆ.
ಮನುಷ್ಯ, ಪ್ರಾಣಿ, ಜೀವಚರಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಕೃತಿಯಲ್ಲಿರುವ ಅರಳಿಮರ ಮತ್ತು ಬೇವಿನಮರಕ್ಕೂ ಮದುವೆ ಮಾಡಿಸುವ ಸಂಪ್ರದಾಯವೂ ಇದೆ. ಈ ಮದುವೆಯಲ್ಲಿ ಮಹಿಳೆಯರು ಕಳಶಗಳನ್ನು ತಂದು ಪೂಜೆ ಮಾಡಿ ಅರಳಿಮರ (ವರ) ಮತ್ತು ಬೇವಿನಮರ(ವಧು) ಗಳನ್ನು ಸಿಂಗಾರ ಮಾಡಿ ಮನೆತುಂಬಿಸುವ ಶಾಸ್ತçವನ್ನು ಮಾಡಲಾಗುತ್ತದೆ. ಇದೇ ವೇಳೆ ಬಳೆ ತೊಡಿಸುವ ಶಾಸ್ತçವೂ ನಡೆಯುತ್ತದೆ. ಬಳಿಕ ಮಂಗಳವಾದ್ಯ ದೊಂದಿಗೆ ತಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುತೈದೆಯರು ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಪುರೋಹಿತರು ಮಂತ್ರಗಳನ್ನು ಪಠಿಸಿ ಮಾಂಗಲ್ಯಧಾರಣೆಯೊAದಿಗೆ ಮದುವೆ ಮಾಡಿಸುತ್ತಾರೆ. ಇಷ್ಟು ಆದ ಬಳಿಕ ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆಯೂ ಮಾಡಲಾಗುತ್ತದೆ. ಈ ಮದುವೆಗಳನ್ನು ನಾವು ಮೂಢನಂಬಿಕೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಪೂರ್ವಜರು ಇಂತಹ ಸಂಪ್ರದಾಯ ಮಾಡಿದ್ದಾರೆ ಎನ್ನುವುದಾದರೆ ಅನುಭವದಿಂದಲೇ ಮಾಡಿರುತ್ತಾರೆ ಎಂಬ ವಿಚಾರವನ್ನು ತಳ್ಳಿಹಾಕುವಂತಿಲ್ಲ. ಅದು ಏನೇ ಇರಲಿ ಪ್ರಕೃತಿಯನ್ನು ಕಾಪಾಡುವುದು ನಾವು ಮಾಡಬೇಕಾದ ಕೆಲಸವಾಗಿದೆ. ಅದರ ರಕ್ಷಣೆಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡಬೇಕಾಗಿದೆ. ಅದು ಮಾಡದ ಹೊರತು ವಾತಾವರಣದ ಏರುಪೇರು ಹೀಗೆಯೇ ಮುಂದುವರೆ ಯಲಿದ್ದು, ಆಗ ನಾವು ಯಾವ ಮದುವೆ ಮಾಡಿದರೂ ವರುಣ ಕೃಪೆ ತೋರಲಾರ ಎಂಬುದು ನೆನಪಿನಲ್ಲಿರ ಬೇಕಷ್ಟೆ.
- ಬಿ. ಎಂ. ಲವಕುಮಾರ್, ಕಗ್ಗೋಡ್ಲು.