ಮಡಿಕೇರಿ, ಜೂ. ೩೦: ಮಡಿಕೇರಿ ನಗರಸಭೆಯ ೨ನೇ ಅವಧಿಯ ಒಂದು ವರ್ಷಗಳ ಕಾಲದ ಸ್ಥಾಯಿ ಸಮಿತಿಗೆ ೧೧ ಸದಸ್ಯರನ್ನು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ವಿಪಕ್ಷಗಳಿಗೆ ೫ ಸ್ಥಾನ ನೀಡುವಂತೆ ಎಸ್.ಡಿ.ಪಿ.ಐ. ಸದಸ್ಯರು ಪಟ್ಟು ಹಿಡಿದರು. ಕೊನೆಗೆ ಎಸ್.ಡಿ.ಪಿ.ಐ. ನ ೨ ಸದಸ್ಯರು ಸಮಿತಿಯಲ್ಲಿ ನೇಮಿಸಿಕೊಳ್ಳುವಂತೆ ಪಟ್ಟು ಹಿಡಿಯಲಾಯಿತು. ಆದರೆ, ಆಡಳಿತರೂಢ ಬಿಜೆಪಿ ಎಸ್.ಡಿ.ಪಿ.ಐ. ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಮೇರೆ ಎಸ್ಡಿಪಿಐ ಸದಸ್ಯರು ಸಮಿತಿ ಸ್ಥಾನವನ್ನು ನಿರಾಕರಿಸಿದರು.
ಸಮಿತಿ ಸದಸ್ಯರಾಗಿ ಬಿಜೆಪಿಯ ಶಾರದಾ ನಾಗರಾಜ್, ಸಬಿತಾ, ಉಷಾಕುಮಾರಿ, ಕಲಾವತಿ, ಕಾಳಚಂಡ ಅಪ್ಪಣ್ಣ, ಚಂದ್ರಶೇಖರ್, ಚಿತ್ರಾವತಿ, ಎಸ್.ಸಿ. ಸತೀಶ್, ಕೆ.ಎಸ್. ರಮೇಶ್ ಸೇರಿದಂತೆ ಕಾಂಗ್ರೆಸ್ನ ರಾಜೇಶ್ ಯಲ್ಲಪ್ಪ, ಜೆಡಿಎಸ್ನ ಮುಸ್ತಾಫ ಆಯ್ಕೆಗೊಂಡರು.
ಆಯ್ಕೆ ಮುನ್ನ ರಾಜೇಶ್ ಯಲ್ಲಪ್ಪ ಮಾತನಾಡಿ, ವಿಪಕ್ಷಗಳನ್ನು ಹೊರಗಿಟ್ಟು ಸಮಿತಿ ರಚನೆ ನೀತಿ ಸರಿಯಲ್ಲ. ಕನಿಷ್ಟ ೫ ಮಂದಿ ವಿಪಕ್ಷ ಸದಸ್ಯರಿಗೆ ಅವಕಾಶ ನೀಡಿ. ಕಳೆದ ಬಾರಿ ಸ್ಥಾಯಿ ಸಮಿತಿಯಿಂದ ವಿಪಕ್ಷ ಸದಸ್ಯರ ವಾರ್ಡ್ಗಳಿಗೆ ಅನುದಾನ ಲಭಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರೆ, ಎಸ್.ಡಿ.ಪಿ.ಐ. ಸದಸ್ಯ ಮನ್ಸೂರ್ ಅಲಿ ಇದು ಪ್ರಜಾಪ್ರಭುತ್ವದ ಕಗ್ಗೂಲೆ. ಇದೊಂದು ಸರ್ವಾಧಿಕಾರ ಧೋರಣೆ. ನಮ್ಮನ್ನು ಸಮಿತಿಯೊಳಗೆ ಹಾಕಿಕೊಳ್ಳಲು ಬಿಜೆಪಿಗೆ ಭಯವಿದೆ ಎಂದು ಕಿಡಿಕಾರಿದರು.
ಸದಸ್ಯ ಬಷೀರ್ ಮಾತನಾಡಿ, ಬಿಜೆಪಿಯಿಂದ ಅಧಿಕಾರ ದುರುಪಯೋಗವಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಬಯಲಿಗೆಳೆಯುತ್ತೇವೆ ಎಂದು ಸವಾಲೆಸೆದರು. ನಿಮಗೆ ಅಧಿಕಾರ ನೀಡಿ ಜನ ‘ತಲೆ ಚಚ್ಚಿಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿಯ ತಮ್ಮ ವಾರ್ಡ್ಗಳಲ್ಲಿಯೇ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮತ ನೀಡಿಲ್ಲ. ಮೊದಲು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಸದಸ್ಯ ಮಹೇಶ್ ಜೈನಿ ಮಾತನಾಡಿ, ವಿಪಕ್ಷ ಎಸ್.ಡಿ.ಪಿ.ಐ. ನ ಬುಟ್ಟಿಯೊಳಗೆ ಹಾವಿಲ್ಲ. ಸುಮ್ಮನೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭ ಎಸ್.ಡಿ.ಪಿ.ಐ. ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ನಿರ್ಧಾರ ಮಾಡಿರುವುದನ್ನು ಆಕ್ಷೇಪಿಸಿದರು. ಒಂದು ವಾರದ ಬಳಿಕ ಆಯ್ಕೆಗೊಂಡ ಸ್ಥಾಯಿ ಸಮಿತಿ ಸದಸ್ಯರು ಅಧ್ಯಕ್ಷರ ಆಯ್ಕೆ ಮಾಡಲಿದ್ದಾರೆ.