ಮಡಿಕೇರಿ, ಜೂ. ೩೦: ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಲ್ಲಿ ವಾತಾವರಣದಲ್ಲಿನ ಏರುಪೇರಿನಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಭತ್ತದ ಫಸಲು ಸೇರಿದಂತೆ ಇತರ ಕೃಷಿ ಫಸಲಿಗೂ ಧಕ್ಕೆಯಾಗುತ್ತಿದೆ.

ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಬೆಳೆಗೆ ಈ ವರ್ಷ ಬೇಸಿಗೆ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಿದ್ದ ಅಡ್ಡಮಳೆ (ಕಾಫಿ ಹೂ ಮಳೆ) ಸರಿಯಾದ ಸಮಯಕ್ಕೆ ಸಿಗದೆ ಸಮಸ್ಯೆಯಾಗಿರುವುದು ಒಂದೆಡೆಯಾಗಿದೆ. ಜನವರಿ ತಿಂಗಳಿನಲ್ಲಿ ಅದೂ ಅಗತ್ಯವಲ್ಲದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಮಳೆಯಾಗಿತ್ತು. ಈ ಅಕಾಲಿಕ ಮಳೆಯಿಂದಾಗಿ ಕಾಫಿ ಫಸಲಿಗೆ ಸಂಬAಧಿಸಿದAತೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಆ ಸಂದರ್ಭದಲ್ಲಿ ಕಾಫಿ ಮೊಗ್ಗು ಮುಂದುವರಿದಿರಲಿಲ್ಲ.

ಈ ಮಳೆಯಿಂದಾಗಿ ಉಂಟಾದ ಸನ್ನಿವೇಶವನ್ನು ಸರಿಪಡಿಸಲು ಬೆಳೆಗಾರರು ತರಾತುರಿಯಲ್ಲಿ ಪೂರಕವಾಗಿ ಮತ್ತೆ ನೀರು ಹಾಯಿಸಬೇಕಾದ ಸಂಕಷ್ಟವನ್ನು ಎದುರಿಸುವಂತಾಗಿತ್ತು. ಅಲ್ಲದೆ ಕಾಫಿ ಕುಯಿಲಿಗೂ ಧಕ್ಕೆಯಾಗಿತ್ತು. ಜನವರಿಯಲ್ಲಿ ಮಳೆಯಾದ ಬಳಿಕ ಏಪ್ರಿಲ್ ಅಂತ್ಯದ ತನಕವೂ ಮತ್ತೆ ಮಳೆಯನ್ನೇ ಕಾಣಲಿಲ್ಲ. ಇದರಿಂದಾಗಿ ಮುಂದಿನ ಫಸಲಿಗೆ ಶೇ. ೪೦ ರಷ್ಟು ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

ಕರಿಮೆಣಸಿಗೂ ಮಾರ್ಚ್-ಏಪ್ರಿಲ್ ತಿಂಗಳ ಅಗತ್ಯ ಸಂದರ್ಭದಲ್ಲಿ ಮಳೆಯಾಗದೆ ಸಮಸ್ಯೆಯಾಗಿದೆ. ಮಳೆ ಕೊರತೆಯಿಂದಾಗಿ ಇನ್ನೂ ತಿರುಳು ಮುಂದುವರಿಯದAತಾಗಿದೆ. ಇದು ಬೇಸಿಗೆ ಸಂದರ್ಭದ ವ್ಯತಿರಿಕ್ತ ಪರಿಣಾಮದಂತಾಗಿದೆ. ಈ ಪರಿಸ್ಥಿತಿ ಒಂದೆಡೆಯಾದರೆ ಇದೀಗ ಜೂನ್ ತಿಂಗಳು ಕೊನೆಗೊಂಡರೂ ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮಳೆ ರಭಸ ಕಂಡಿಲ್ಲ. ಬಹುತೇಕ ಶೇ. ೫೦ ರಷ್ಟು ಮಳೆ ಕಡಿಮೆಯಾಗಿದೆ.

ಮುಂಗಾರು ಕ್ಷೀಣಗೊಂಡಿರುವುದರಿAದ ಇದು ಭತ್ತ, ಮುಸುಕಿನ ಜೋಳ, ಶುಂಠಿ ಬೆಳೆಗಳಿಗೂ ಧಕ್ಕೆಯಾಗುತ್ತಿದೆ. ಮಳೆ ಕೊರತೆಯಿಂದಾಗಿ ಈಗಾಗಲೇ ನಡೆಯಬೇಕಿದ್ದ ಭತ್ತದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ನೀರಿನ ಸೌಲಭ್ಯ ಇರುವ ಬೆರಳೆಣಿಕೆಯ ಮಂದಿ ಮಾತ್ರ ಒಂದಷ್ಟು ಸಿದ್ಧತೆ ನಡೆಸಿದ್ದು, ಮಳೆಯನ್ನೇ ಅವಲಂಬಿಸಿರುವ ಇತರ ರೈತರು ಆಗಸದತ್ತ ಮುಖ ಮಾಡುವಂತಾಗಿದೆ. ಜುಲೈ ೧೫ ರ ತನಕ ಈ ಪರಿಸ್ಥಿತಿ ಮುಂದುವರಿದಲ್ಲಿ ಈ ಬಾರಿ ಬಹುತೇಕ ರೈತರು ಭತ್ತದ ಕೃಷಿಯನ್ನೇ ಕೈಬಿಡುವ ಸಾಧ್ಯತೆಯಿದೆ ಎಂದೂ ಅನುಭವಿ ರೈತರು ಹೇಳುತ್ತಾರೆ. ಶುಂಠಿ, ಮುಸುಕಿನ ಜೋಳಕ್ಕೂ ಮಳೆ ಕೊರತೆ ಸಮಸ್ಯೆಯಾಗಿದೆ.

ಇನ್ನು ಕಾಫಿಗೆ ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ಮಳೆಯನ್ನು ಅವಲಂಬಿಸಿ ಗೊಬ್ಬರ ಪೂರೈಸಲಾಗುತ್ತಿತ್ತು.

(ಮೊದಲ ಪುಟದಿಂದ) ಆದರೆ ಈ ಬಾರಿ ಮಳೆಯ ಕೊರತೆ ಕಂಡುಬAದಿರುವುದು ಗೊಬ್ಬರ ಪೂರೈಕೆಯನ್ನೂ ಸಕಾಲದಲ್ಲಿ ಮಾಡಲು ಹಿನ್ನಡೆಯಾದಂತಿದೆ.

ಈಗಿನ ಪರಿಸ್ಥಿತಿಯ ಬಗ್ಗೆ ಒಂದೆರಡು ಕೃಷಿಕರು, ಕೃಷಿ ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡಿದ್ದು, ಅವರುಗಳ ಅಭಿಪ್ರಾಯ ಇಂತಿದೆ.

ಮುAದಿನ ಫಸಲಿಗೆ ಧಕ್ಕೆ - ತೇಜಸ್

ಕಾಫಿಗೆ ಗೊಬ್ಬರವನ್ನು ಈ ಬಾರಿ ಸಕಾಲದಲ್ಲಿ ನೀಡಲು ಸಾಧ್ಯವಾಗಿಲ್ಲ. ಇದು ಮುಂದಿನ ಫಸಲಿಗೆ ಧಕ್ಕೆಯಾಗಲಿದೆ. ಕರಿಮೆಣಸು ಬಳ್ಳಿಗಳಲ್ಲಿ ಕೊತ್ತು ಇನ್ನೂ ಮುಂದುವರಿಯದಾಗಿದೆ. ಇನ್ನು ಭತ್ತದ ಕೃಷಿಗೆ ತೋಡು, ಕೆರೆಯಿಂದ ಗದ್ದೆಗೆ ನೀರು ಹರಿಸುವಂತಾಗಿದೆ. ಇಂತಹ ಸೌಕರ್ಯವೂ ಬಹುತೇಕ ರೈತರಿಗೆ ಇಲ್ಲ. ಈಗಾಗಲೇ ಜೂನ್ ತಿಂಗಳು ಮುಗಿದಿದ್ದು, ಭತ್ತ ಕೃಷಿ ಮಾಡುವುದೋ ಬಿಡುವುದೋ ಎಂಬ ದ್ವಂದ್ವ ರೈತರಲ್ಲಿ ಎದುರಾಗಿದೆ. ಏಕೆಂದರೆ ದಿನಕಳೆದಂತೆ ಕಾಫಿ ತೋಟದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಕಗ್ಗೋಡ್ಲುವಿನ ಪ್ರಗತಿಪರ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಭತ್ತಕ್ಕೆ ನೀಡುತ್ತಿರುವ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದರೆ ಒಂದಷ್ಟು ರೈತರು ಹೆಚ್ಚು ಆಸಕ್ತಿ ತೋರಬಹುದಾದರೂ, ಈ ಬಗ್ಗೆ ಸ್ಪಂದನ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಜು. ೧೫ ರ ತನಕ ಇದೇ ಪರಿಸ್ಥಿತಿಯಾದಲ್ಲಿ ಕಷ್ಟ - ವೀರೇಂದ್ರ ಕುಮಾರ್

ಪ್ರಸ್ತುತ ಕಾಫಿಗೆ ಗೊಬ್ಬರ ಪೂರೈಕೆಗೆ ತೊಂದರೆಯಾಗಿದೆ. ಭತ್ತದ ಕೃಷಿ ಕೆಲಸಕ್ಕೆ ಈಗಾಗಲೇ ಮಳೆ ಬೇಕಾಗಿತ್ತು. ಈ ವಾರದಲ್ಲಿ ಮಳೆ ಪ್ರಾರಂಭಗೊAಡರೂ ಸುಧಾರಿಸಿಕೊಳ್ಳಬಹುದಾಗಿದೆ. ಆದರೆ ಜುಲೈ ೧೫ ರ ತನಕ ಇದೇ ಸನ್ನಿವೇಶ ಮುಂದುವರಿದಲ್ಲಿ ಹೆಚ್ಚು ಸಮಸ್ಯೆಯಾಗುತ್ತದೆ. ಕರಿಮೆಣಸು ಕೊತ್ತು ಬಂದರೂ ಕಾಯಿ ದಾಟು ಮಣಿಯಾಗುವ ಅಪಾಯವಿದೆ ಎಂಬುದಾಗಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಹೇಳಿದ್ದಾರೆ.

ಶೇ. ೪೦ ರಷ್ಟು ಕಾಫಿಗೆ ಹಾನಿ-ಡಾ. ಸಣ್ಣುವಂಡ ಕಾವೇರಪ್ಪ

ಬೇಸಿಗೆ ಸಂದರ್ಭ ಅಗತ್ಯ ಸಮಯದಲ್ಲಿ ಮಳೆ ಸಿಗದಿರುವುದು (ಬ್ಲಾಸಂ ಶವರ್) ಹಾಗೂ ಪ್ರಸ್ತುತ ಗೊಬ್ಬರ ಪೂರೈಕೆಗೆ ಸಮಸ್ಯೆಯಾಗಿರುವುದು ಮುಂದಿನ ಸಾಲಿನಲ್ಲಿ ಶೇ. ೪೦ ರಷ್ಟು ಕಾಫಿ ಫಸಲಿಗೆ ಧಕ್ಕೆಯಾದಂತಾಗಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದ್ದಾರೆ. ಕಳೆದ ವರ್ಷಕ್ಕಿಂತ ಶೇ. ೫೦ ರಷ್ಟು ಮಳೆ ಕೊರತೆ ಕಂಡುಬAದಿದೆ. ಕರಿಮೆಣಸು ಈಗ ಕೊತ್ತು ಬಂದರೂ ಅದು ನಿಲ್ಲುವುದಿಲ್ಲ. ಭತ್ತದ ಬೆಳೆಗೂ ನೀರಿನ ಕೊರತೆಯಿಂದಾಗಿ ರೈತರು ಕಂಗಾಲಾಗುವAತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.