ವೀರಾಜಪೇಟೆ, ಜೂ. ೨೮: ವಿದ್ಯಾರ್ಥಿಗಳಿಗೆ ಪ್ರಕೃತಿ ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆ ಕುರಿತ ಪಠ್ಯ ಬೋಧನೆ ಆಗಬೇಕು. ವಿದ್ಯಾರ್ಥಿಗಳನ್ನು ಅರಣ್ಯಗಳಿಗೆ ಕರೆದುಕೊಂಡು ಹೋಗಿ ಅರಣ್ಯದ ನಡುವೆ ಪ್ರಕೃತಿಯ ಬೋಧನೆಯಾಗಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರರು, ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ, ವೀರಾಜಪೇಟೆ ತಾಲೂಕು ಘಟಕ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳನ್ನು ಅರಣ್ಯಗಳಿಗೆ ಕರೆದುಕೊಂಡು ಹೋಗಿ ಅರಣ್ಯದ ನಡುವೆ ಪ್ರಕೃತಿಯ ಪಾಠ ಕಲಿಸಬೇಕು. ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯ ಆಗಬೇಕು. ಇದರ ವೆಚ್ಚವನ್ನು ಸರಕಾರವೇ ಭರಿಸಬೇಕು. ಇದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮೂಡುತ್ತದೆ. ನಮ್ಮ ದೇಶದಲ್ಲಿ ಶೆ.೨೧.೭ ರಷ್ಟು ಮಾತ್ರ ಕಾಡು ಪ್ರದೇಶವಿದೆ. ಅದನ್ನು ಬೆಳೆಸುವುದರ ಜೊತೆಗೆ ಉಳಿಸುವ ಕೆಲಸ ಮಾಡಬೇಕು ಎಂದರು.
ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಸಾಮಾಜಿಕ ಅರಣ್ಯ ಉಪ ವಲಯಾಧಿಕಾರಿ ಎಚ್.ಆರ್. ಮಧುಕುಮಾರ್ ಮಾತನಾಡಿ ಪರಿಸರ ದಿನಾಚರಣೆ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಆಚರಣೆಯಾಗಬೇಕು, ಅಲ್ಲದೇ ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ನಾವು ನೆಟ್ಟು ಪೋಷಿಸುವ ಒಂದೊAದು ಗಿಡ ಕೂಡ ಪರಿಸರಕ್ಕೆ ತನ್ನದೆಯಾದ ಕೊಡುಗೆ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿ ಉಳಿಸುವ ಜವಬ್ದಾರಿ ನಿರ್ವಹಿಸಬೇಕೆಂದರು.
ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಮಾತನಾಡಿ, ಪ್ರಕೃತಿ ಮುನಿದರೆ ಏನೆಲ್ಲಾ ಸಂಭವಿಸುತ್ತದೆ ಎನ್ನುವುದನ್ನು ನಾವು ಈಗಾಗಲೇ ಅರಿತುಕೊಂಡಿದ್ದೇವೆ. ಕೊಡಗಿನಲ್ಲಿ ೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವೇ ಇದಕ್ಕೆ ಸಾಕ್ಷಿ. ಪ್ರಕೃತಿಗೆ ನಾವು ಅನಿವಾರ್ಯವಲ್ಲ, ನಮಗೆ ಪ್ರಕೃತಿ ಅನಿವಾರ್ಯ. ಹಾಗಾಗಿ ಪ್ರಕೃತಿ ಉಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ದಟ್ಟವಾದ ಅರಣ್ಯಗಳಿದ್ದು ಬೆಟ್ಟಗುಡ್ಡಗಳು ಸದಾ ಹಸಿರಾಗಿದ್ದವು. ಆದರೆ ಪ್ರಸ್ತುತ ಅರಣ್ಯ ನಾಶಕ್ಕೆ ಮನುಷ್ಯನೇ ಕಾರಣವಾಗಿ ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದೆ. ನಾವು ಪರಿಸರದ ಕಾಳಜಿ ವಹಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರೂ ಗಿಡ ನೆಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲರಾದ ಆನಂದ್ ಕಾರ್ಲ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಪ್ಪಂಡ ವೀಣಾ ರವೀಂದ್ರ ಅವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಆವರಣದಲ್ಲಿ ವಿವಿಧ ಜಾತಿಯ ಗಿಡÀಗಳನ್ನು ನೆಡಲಾಯಿತು.
ಈ ಸಂದರ್ಭ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.