ಶನಿವಾರಸಂತೆ, ಜೂ. ೨೮: ರೋಟರಿ ಸಂಸ್ಥೆಗೆ ೧೧೮ ವರ್ಷಗಳ ಇತಿಹಾಸವಿದ್ದು ಪ್ರಪಂಚದಿAದಲೇ ಪೋಲಿಯೋವನ್ನು ನಿರ್ಮೂಲನೆ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ಈ ಸಂಸ್ಥೆಗಿದೆ ಎಂದು ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಆರ್.ಎಸ್.ನಾಗಾರ್ಜುನ್ ಹೇಳಿದರು. ಪಟ್ಟಣದ ಚಿನ್ನಳ್ಳಿ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ನಡೆದ ರೋಟರಿ ಸಂಸ್ಥೆಯ ೨೦೨೩-೨೪ ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಅಪಘಾನಿಸ್ಥಾನದಲ್ಲಿ ೩ ಜಿಲ್ಲೆ ಮತ್ತು ಪಾಕಿಸ್ತಾನದಲ್ಲಿ ೨ ಜಿಲ್ಲೆಗಳಲ್ಲಿ ಮಾತ್ರ ಪೋಲಿಯೋ ಉಳಿದಿದ್ದು ೨೦೨೩ ನೇ ವರ್ಷ ಪೋಲಿಯೋ ಕಟ್ಟಕಡೆಯ ವರ್ಷವಾಗಲಿ ಎಂಬ ಆಶಾಭಾವನೆ ಯಿದೆ. ಕೊರೊನಾ ಕಾಲದಲ್ಲೂ ರೋಟರಿ ತನ್ನ ಸೇವೆ ಸಲ್ಲಿಸಿದೆ. ಶನಿವಾರಸಂತೆಯ ರೋಟರಿ ಸಂಸ್ಥೆಯಲ್ಲಿ ಕುಟುಂಬವರ್ಗವೂ ಪಾಲ್ಗೊಳ್ಳುತ್ತಿರುವುದು ಆಶಾದಾಯಕ ವಾಗಿದ್ದು ಮಹಿಳೆಯರು ಸದಸ್ಯ ರಾಗುತ್ತಿರುವುದು ಸಂಸ್ಥೆ ಉನ್ನತಮಟ್ಟ ಸಾಧಿಸುವ ಮುನ್ಸೂಚನೆಯಾಗಿದೆ ಎಂದರು.
ಸಹಾಯಕ ರಾಜ್ಯಪಾಲ ದಾನಿ ಎಸ್.ಕೆ.ಸತೀಶ್ ಮಾತನಾಡಿ, ರೋಟರಿ ಪಾಲಿಗೆ ೨೦೨೩ ಸೃಜನಾತ್ಮಕ ವರ್ಷವಾಗಿದ್ದು ವಿನೂತನ ದೃಷ್ಟಿಯಲ್ಲಿ ಸೇವಾ ಕಾರ್ಯಗಳ ಮೂಲಕ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಬೇಕು ಎಂದು ಕರೆ ನೀಡಿದರು.
ರೋಟರಿ ನಿಕಟಪೂರ್ವ ಅಧ್ಯಕ್ಷ ಕೆ.ಪಿ.ಜಯಕುಮಾರ್ ಮಾತನಾಡಿ, ರೋಟರಿ ವಿಭಿನ್ನ ಅನುಭವ ನೀಡುವ ಸಂಸ್ಥೆಯಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸಾರ್ಥಕ ಬದುಕು ಬಾಳಬೇಕು. ಎಲ್ಲರ ಜತೆ ಘಮಘಮಿಸುವ ತುಪ್ಪದಂತೆ ಬೆರೆತು ಸಮಾಜಮುಖಿ ಕೆಲಸ ಮಾಡಬೇಕು. ಸದ್ದು ಮಾಡಿ ಮಾಡುವ ಸೇವೆಯೇ ಸ್ಫೂರ್ತಿದಾಯಕ ಎಂದರು.
ಸಹಾಯಕ ರಾಜ್ಯಪಾಲ ಎಂ.ಡಿ.ಲಿಖಿತ್ ಮಾತನಾಡಿ, ರೋಟರಿ ಜನರಲ್ಲಿ ಭರವಸೆ ಮೂಡಿಸುವ ಸಾರ್ವಜನಿಕ ಸೇವೆಗೆ ಆದ್ಯತೆ ನೀಡಬೇಕು. ಜನರಿಗೇನು ಕೊಡುಗೆ ಕೊಡುತ್ತೇವೆಂಬುದೇ ಮುಖ್ಯವಾಗಿದೆ. ಸದಸ್ಯರು ನಿಂತ ನೀರಾಗದೇ ಹರಿವ ನೀರಾಗಬೇಕು ಎಂದರು.
ನೂತನ ಅಧ್ಯಕ್ಷ ಎ.ಎಚ್. ಚಂದ್ರಕಾAತ್ ಮಾತನಾಡಿ, ರೋಟರಿ ವಿವಿಧ ಪ್ರಕಾರದ ಸಮಾಜಮುಖಿ ಕೆಲಸಗಳನ್ನು ಮಾಡುವ ಸಂಸ್ಥೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ರೋಟರಿ ಮಳೆನೀರು ಕೊಯ್ಲು, ಅಂಗನವಾಡಿ ಅಭಿವೃದ್ಧಿ, ಹಿರಿಯ ನಾಗರಿಕರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಪತ್ರಿಕಾ ಪ್ರಚಾರವೂ ರೋಟರಿ ಸೇವೆಗೆ ಅಗತ್ಯವಾಗಿದ್ದು ವಿಶ್ವದಲ್ಲಿ, ಮನುಷ್ಯ ಜಗತ್ತಿನಲ್ಲಿ ಭರವಸೆ ಮೂಡಿಸುವ ಸೇವೆಯೇ ಮುಖ್ಯವಾಗಿದೆ ಎಂದರು.
ರೋಟರಿ ವಲಯ ಸೇನಾನಿಗಳಾದ ಎಚ್.ವಿ.ದಿವಾಕರ್, ಎಚ್.ಎಂ.ದಿವಾಕರ್ ಮಾತನಾಡಿ ದರು. ನಿಕಟ ಪೂರ್ವ ಕಾರ್ಯದರ್ಶಿ ಎ.ಡಿ.ಮೋಹನ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಸೋಮಶೇಖರ್, ನಿರ್ದೇಶಕರಾದ ಬೀನಾ ಅರವಿಂದ್, ಶ್ವೇತಾವಸಂತ್, ಮೋಹನಕುಮಾರಿ, ವಸಂತ್ ಕುಮಾರ್, ಟಿ.ಆರ್. ಪುರುಷೋತ್ತಮ್, ಎಸ್.ಆರ್.ಮಧು, ಶುಭು. ಚಂದನ್, ಅರವಿಂದ್, ಮೋಹನ್ ಕುಮಾರ್, ಎಚ್.ಎಸ್. ಸಾಗರ್, ಅರುಣ್, ಅಶೋಕ್, ಯಶ್ವಂತ್ ಉಪಸ್ಥಿತರಿದ್ದರು.